ಮಡಿಕೇರಿ, ಮೇ 2: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವದ ಈ ಬಾರಿಯ ಪಂದ್ಯಾಟ ಕೊನೆಯ ಹಂತದತ್ತ ಸಾಗುತ್ತಿದೆ. 20ನೇ ವರ್ಷದ ‘ಹಾಕಿ ನಮ್ಮೆ’ಯ ವಿಜೇತರಾಗಬಹುದೆಂಬ ಕೌತುಕಕ್ಕೆ ಮುಂದಿನ ಐದು ದಿನಗಳಲ್ಲಿ ಉತ್ತರ ಸಿಗಲಿದೆ. 299 ಕುಟುಂಬಗಳು ಹೆಸರು ದಾಖಲಿಸಿಕೊಂಡಿದ್ದು ಈ ಬಾರಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯುತ್ತಿರುವ ಶಾಂತೆಯಂಡ ಕಪ್ ಹಾಕಿ ಉತ್ಸವದಲ್ಲಿ ಮೇ 2ರ ತನಕ 283 ಕುಟುಂಬಗಳು ನಿರ್ಗಮಿಸಿ ದಂತಾಗಿದ್ದು, ಇದೀಗ ಕೇವಲ 16 ತಂಡಗಳು ಕಣದಲ್ಲಿ ಉಳಿದಿದ್ದು, ಹದಿನಾರರ ಘಟ್ಟಕ್ಕೆ ಪಂದ್ಯಾವಳಿ ತಲುಪಿದೆ.

ತಾ. 3 ರಿಂದ (ಇಂದಿನಿಂದ) ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಾಟ ಜರುಗಲಿದೆ. ತಾ. 3 ಹಾಗೂ 4 ರಂದು ಪ್ರೀಕ್ವಾರ್ಟರ್ ಫೈನಲ್, ತಾ. 5 ರಂದು ಕ್ವಾರ್ಟರ್ ಫೈನಲ್, ತಾ. 6 ರಂದು ಸೆಮಿ ಫೈನಲ್ ಹಾಗೂ ತಾ. 8 ರಂದು 20ನೇ ವರ್ಷದ ಹಾಕಿ ಉತ್ಸವದ ರೋಚಕ ಫೈನಲ್ ನಡೆಯಲಿದೆ.

ಪ್ರಸ್ತುತ ರೋಚಕತೆಯಿಂದ ಕೂಡಿದ ಜಿದ್ದಾಜಿದ್ದಿನ ಹೋರಾಟ ಕಂಡುಬರುತ್ತಿದೆ. ಪ್ರಶಸ್ತಿ ಗಳಿಸುವ ನೆಚ್ಚಿನ ತಂಡಗಳಲ್ಲಿ ಕೆಲವು ಕುಟುಂಬಗಳು ಪಂದ್ಯಾ ವಳಿಯಿಂದ ನಿರ್ಗಮಿಸಿದ್ದರೆ, ಹೊಸ ತಂಡಗಳು ಮುನ್ನಡೆಗಳಿಸುತ್ತಿರುವದು ಹಾಕಿ ಅಭಿಮಾನಿಗಳಲ್ಲಿ ಉತ್ಸುಕತೆ ಸೃಷ್ಟಿಸುತ್ತಿದೆ.

ಮಡಿಕೇರಿ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಶಾಂತೆಯಂಡ ಕಪ್ ಹಾಕಿ ಉತ್ಸವ ಇದೀಗ ಒಂದೇ ಮೈದಾನದಲ್ಲಿ ನಡೆಯುತ್ತಿದೆ. ಮೇ 2 ರಂದು ನಡೆದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್‍ಗಳಾದ ಪಳಂಗಂಡ, ಮಂಡೇಪಂಡ, ಕೂತಂಡ, ಕಲಿಯಂಡ ಪ್ರೀಕ್ವಾರ್ಟರ್ ಪ್ರವೇಶಿಸಿದರೆ, ಮುರುವಂಡ, ಕಾಂಡಂಡ, ಕಳ್ಳಿಚಂಡ, ಅಪ್ಪಚ್ಚೀರ ತಂಡಗಳು ಜಯ ಸಾಧಿಸಿವೆ.

ಮೈದಾನ 1ರಲ್ಲಿ ನಡೆದ ಪಂದ್ಯದಲ್ಲಿ ಕಾಂಡಂಡ ತಂಡ ಬಲ್ಲಚಂಡ ವಿರುದ್ಧ ಸಡನ್‍ಡೆತ್‍ನಲ್ಲಿ 7-6 ರಿಂದ ಜಯಗಳಿಸಿತು. ಮಾಜಿ ಚಾಂಪಿಯನ್ ಮಂಡೇಪಂಡ ಬೇಪಡಿಯಂಡ ತಂಡವನ್ನು 3-0 ಯಿಂದ ಮಣಿಸಿತು. ಸಜನ್, ಚಂದನ್ ಹಾಗೂ ಸಿದ್ದು ಗೋಲು ಬಾರಿಸಿದರು. ಕಳ್ಳಿಚಂಡ ತಂಡ ಕಡೇಮಾಡ ಕುಟುಂಬವನ್ನು 4-1 ರಿಂದ ಸೋಲಿ ಸಿತು. ವಿಜೇತರ ಪರ ಕಾವೇರಪ್ಪ (3) ಹಾಗೂ ಸಾವನ್, ಕಡೇಮಾಡ ಪರ ರಚನ್ ಗೋಲು ಗಳಿಸಿದರು.

ಕೂತಂಡ ತಂಡ ಮೇಕೇರಿರ ಎದುರು 1-0 ಗೋಲಿನಿಂದ ಜಯ ಸಾಧಿಸಿತು. ಸಂತೋಷ್ ವಿಜಯದ ಗೋಲು ದಾಖಲಿಸಿದರು. ಅಪ್ಪಚ್ಚೀರ ತಂಡ ಶಿವಚಾಳಿಯಂಡ ತಂಡವನ್ನು ಟೈಬ್ರೇಕರ್‍ನಲ್ಲಿ 6-4 ರಿಂದ ಪರಾಭವಗೊಳಿಸಿತು. ಮಾಜಿ ಚಾಂಪಿಯನ್ ಕಲಿಯಂಡ, ಮಚ್ಚಾರಂಡ ತಂಡದ ಉತ್ಸಾಹಕ್ಕೆ

4-0 ಗೋಲಿನ ಅಂತರದ ಜಯದೊಂದಿಗೆ ತಣ್ಣೀರೆರಚಿತು. ಕಾರ್ಯಪ್ಪ, ಸಂಪನ್, ದೇವಯ್ಯ, ಬಿದ್ದಪ್ಪ, ಗೋಲು ಬಾರಿಸಿದರು.

ಮೈದಾನ 2ರಲ್ಲಿ ಇಂದು 2 ಪಂದ್ಯಾಟ ಮಾತ್ರ ನಡೆಯಿತು. ಮುರುವಂಡ ತಂಡ ಐನಂಡ ವಿರುದ್ಧ 4-0 ರಿಂದ ಜಯಗಳಿಸಿತು. ಮಿಥುನ್ ಅಣ್ಣಯ್ಯ, ಅಪ್ಪಣ್ಣ, ಚರಣ್, ಕಾರ್ಯಪ್ಪ ಗೋಲು ಗಳಿಸಿದರು. ಕಳೆದ ಬಾರಿಯ ಚಾಂಪಿಯನ್ ಪಳಂಗಂಡ 4-0 ಯಿಂದ ಉದ್ದಪಂಡ ವಿರುದ್ಧ ಜಯಗಳಿಸಿತು. ಕಾಳಪ್ಪ (2), ಅಜಯ್ ಹಾಗೂ ಮುತ್ತಣ್ಣ ಗೋಲು ದಾಖಲಿಸಿದರು.

ತಾ. 1 ರ ಫಲಿತಾಂಶ

ತಾ. 1 ರಂದು ನಡೆದ ಪಂದ್ಯಾಟದಲ್ಲಿ ಅಂಜಪರವಂಡ, ಚೇಂದಂಡ ಕುಪ್ಪಂಡ (ಕೈಕೇರಿ), ಕೋಳೇರ, ಐನಂಡ, ಪೆಮ್ಮಂಡ, ಮುರುವಂಡ, ಪಳಂಗಂಡ, ಉದ್ದಪಂಡ ಕೊಂಗೇಟಿರ ಚೆಕ್ಕೇರ ತಂಡಗಳು ಜಯಗಳಿಸಿದ್ದವು.

ಮಾಜಿ ಚಾಂಪಿಯನ್ ನೆಲ್ಲಮಕ್ಕಡ, ಕರಿನೆರವಂಡ, ಮಾಚಂಗಡ, ಚೌರೀರ (ಹೊದ್ದೂರು) ಮದ್ರೀರ, ಕೊಂಗಂಡ, ಮಾಳೇಟಿರ (ಕೆದಮುಳ್ಳೂರು), ಚೇಂದೀರ, ಅರೆಯಡ, ಕೋಣೇರಿರ, ಚೋಯಮಾಡಂಡ ತಂಡಗಳು ಸೋಲು ಅನುಭವಿಸಿತು.