ಮಡಿಕೇರಿ, ನ. 19 : ದೇಶದ ರಕ್ಷಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಹಾಗೂ ಮಾಜಿ ಸೈನಿಕರಿಗೆ ಕಾನೂನಡಿಯಲ್ಲಿ ಅಗತ್ಯ ಸೇವೆಗಳನ್ನು ಪಡೆಯಬಹುದಾಗಿದ್ದು ಈ ಬಗ್ಗೆ ತಿಳಿಯುವಲ್ಲಿ ಸೈನಿಕರು ಮುಂದಾಗುವಂತೆ ಸಶಸ್ತ್ರ ಪಡೆಗಳ ನ್ಯಾಯ ಮಂಡಳಿಯ ನ್ಯಾಯಿಕ ಸದಸ್ಯ ಎಸ್.ಎಸ್. ಸತೀಶ್‍ಚಂದ್ರನ್ ಅವರು ತಿಳಿಸಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮತ್ತು ವಕೀಲರ ಸಂಘದ ವತಿಯಿಂದ ನಡೆದ ನ್ಯಾಯಿಕ ಜಾಗೃತಿ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಶಸ್ತ್ರ ಪಡೆಗಳು ದೇಶದ ಬೆನ್ನೆಲುಬು. ಅವರ ರಕ್ಷಣೆಗೆ ನ್ಯಾಯ ಮಂಡಳಿ ಬದ್ಧವಾಗಿರುತ್ತದೆ. ಸೈನಿಕರ ದಾಖಲಾತಿ, ಗೌರವ ಸೇವಾ ಭದ್ರತೆ, ವೈದ್ಯಕೀಯ ಸೇವೆ ಹಾಗೂ ಮೂಲ ಸೌಲಭ್ಯಗಳ ಸಂಬಂಧ ವಿವಾದಗಳು ಅಥವಾ ದೂರುಗಳು ಇದ್ದಲ್ಲಿ ಸೈನಿಕರು ಸಶಸ್ತ್ರ ಪಡೆಗಳ ನ್ಯಾಯ ಮಂಡಳಿಗೆ ಸಲ್ಲಿಸಿ ಕಾನೂನಡಿಯಲ್ಲಿ ಅಗತ್ಯ ನೆರವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ದೇಶದಲ್ಲಿ ಸಶಸ್ತ್ರ ಪಡೆ ಟ್ರಿಬ್ಯೂನಲ್ ಆ್ಯಕ್ಟ್ 2007, ಆರ್ಮಿ ಕಾಯಿದೆ 1957, ನೌಕಾಪಡೆ ಕಾಯಿದೆ 1957 ಮತ್ತು ವಾಯು ಪಡೆ ಕಾಯಿದೆ 1950ರ ಅಡಿಯಲ್ಲಿ ಹಲವಾರು ಕಾನೂನುಗಳನ್ನು ಹೊರತಂದಿದ್ದು, ಈ ಬಗ್ಗೆ ಅಗತ್ಯ ಮಾಹಿತಿಗಳನ್ನು ಪಡೆಯವದು ಅಗತ್ಯ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಸರ್ಕಾರ ಸೈನಿಕರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾಜಿ ಸೈನಿಕರಿಗಾಗಿ ಆಸ್ಪತ್ರೆ, ಕ್ಯಾಂಟಿನ್ ಸೌಲಭ್ಯ, ನಿವೇಶನ, ಒನ್ ರ್ಯಾಂಕ್ - ಒನ್ ಪೆನ್ಸನ್ ಮತ್ತಿತರ ಹತ್ತು ಹಲವು ಯೋಜನೆಗಳು ಜಾರಿಗೆ ತಂದಿದ್ದು, ಇವುಗಳನ್ನು ಉಪಯೋಗಿಸಿ ಕೊಳ್ಳುವಂತೆ ಆಗಬೇಕು ಮತ್ತು ಜಿಲ್ಲಾ ಸೈನಿಕ ಬೋರ್ಡ್ ಸಭೆಯು ನಡೆಯುತ್ತಿದ್ದು, ಸೈನಿಕರ ಕುಂದು-ಕೊರತೆಯ ಬಗ್ಗೆ ಕಾಳಜಿ ವಹಿಸುತ್ತಿದೆ ಎಂದರು.

ಕೊಚ್ಚಿಯ ಸÀಶಸ್ತ್ರ ಪಡೆಗಳ ನ್ಯಾಯ ಮಂಡಳಿಯ ಆಡಳಿತಾತ್ಮಕ ಸದಸ್ಯ ಎಂ.ಪಿ.ಮುರುಳಿಧರನ್ ಮಾತನಾಡಿ, ಸರ್ಕಾರ ಸÀಶಸ್ತ್ರ ಪಡೆಗಳ ದೂರುಗಳನ್ನು ಪರಿಹರಿಸಲು ನ್ಯಾಯ ಮಂಡಳಿ ರಚಿಸಲು ನಿರ್ಧರಿಸಿತು. ನ್ಯಾಯ ಮಂಡಳಿಯ ರಚನೆಯ ನಂತರ ಪ್ರಕರಣಗಳು ಕಡಿಮೆಯಾಗುತ್ತಿರುವದು ಗಮನಾರ್ಹವಾಗಿದೆ. ಆಗಿಂದ್ದಾಗೆ ಸೈನಿಕರ ನ್ಯಾಯಾಂಗ ಪ್ರಕರಣಗಳ ತೀರ್ಪುಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ಹೈಕೋರ್ಟ್‍ಗಳಿಗೆ ವರ್ಗಾಹಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ಅವರು ಮಾತನಾಡಿ, ಹೆಚ್ಚು ಸೈನಿಕರನ್ನು ದೇಶಕ್ಕೆ ನೀಡಿದ ಕೀರ್ತಿ ಜಿಲ್ಲೆಯದ್ದಾಗಿದೆ. ಪ್ರತಿ ಸೈನಿಕರು ತಮ್ಮ ವೃತ್ತಿ ಜೀವನದಲ್ಲಿ ತೊಂದರೆಗೆ ಸಿಲುಕುತ್ತಾರೆ. ಈ ಬಗ್ಗೆ ನಿಗಾವಹಿಸಿ ಸಶಸ್ತ್ರ ಪಡೆಗಳ ನ್ಯಾಯ ಮಂಡಳಿಯ ರಚನೆಯಾಗಿದ್ದು, ಇದರ ಪ್ರಯೋಜನವನ್ನು ಸೈನಿಕರು ಪಡೆಯುವಂತೆ ಆಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕ ಎಸ್.ಬಿ.ಸಜ್ಜನ್, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕಿ ಗೀತಾ ಇತರರು ಇದ್ದರು.

ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆ ಟ್ರಿಬ್ಯೂನಲ್ ಆ್ಯಕ್ಟ್‍ನ ನಿಯಮಗಳು ವಿಧಾನಗಳ ಬಗ್ಗೆ ಕೊಚ್ಚಿಯ ನ್ಯಾಯ ಮಂಡಳಿಯ ನೌಕ ಪಡೆ ಕಮಾಂಡರ್ ಜಾನ್ಸನ್ ಮೆಂಡಿಸ್ ಹಾಗೂ ವಾಯುಪಡೆ ಕಮಾಂಡೆಂಟ್ ಆರ್.ಎನ್. ಮಗದಮ್ ಅವರು ಉಪನ್ಯಾಸ ನೀಡಿದರು.