ಸೋಮವಾರಪೇಟೆ, ಆ. 27: ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದರಿಂದ ಸಮಾಜದಲ್ಲಿ ಗೌರವ ಲಭಿಸುತ್ತದೆ. ಜೀವನವೂ ಉತ್ತಮವಾಗಿರುತ್ತದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಆರ್.ಎಸ್. ನಾಗಾರ್ಜುನ ಹೇಳಿದರು.ಇಲ್ಲಿನ ರೋಟರಿ ಸಂಸ್ಥೆಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೀವನದಲ್ಲಿ ಆಸ್ತಿ, ಅಂತಸ್ತು, ಐಶ್ವರ್ಯ ಯಾವದೂ ಶಾಶ್ವತವಲ್ಲ. ಸಮಾಜದಲ್ಲಿ ಬದುಕಿರುವಷ್ಟು ದಿನ ಮನುಕುಲದ ಸೇವೆಗೆ ಸಿದ್ದರಾಗಿರಬೇಕು. ನಾವು ಯಾವದೇ ವೃತ್ತಿಯಲ್ಲಿದ್ದರೂ ವೃತ್ತಿಗೆ ನ್ಯಾಯ ದೊರಕಿಸುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಸಮಾಜದಲ್ಲಿ ಶ್ರೀಮಂತರಾಗಿ ರುವವರು ಹೆಚ್ಚು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಆದರೆ ರೈತಾಪಿ ವರ್ಗದವರಿಗೆ ಸರಿಯಾದ ಮಾರ್ಗದರ್ಶನ ನೀಡುವಂತಹ ಕೆಲಸಗಳು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ರೋಟರಿ ಸದಸ್ಯರು ಕೂಡ ರೈತರಿಗೆ ಸಿಗಬೇಕಾದ ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರೆ ಅದು ಕೂಡ ಸೇವಾ ಕಾರ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಭರತ್ ಭೀಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಸಹಾಯಕ ರಾಜ್ಯಪಾಲರಾದ ಪ್ರಶಾಂತ್, ಮಹೇಶ್ ಕುಮಾರ್, ಸುಧಾ ನಾಗರ್ಜುನ, ರೋಟರಿ ಕಾರ್ಯದರ್ಶಿ ವನಮಾಲಿ ಹೆಬ್ಬಾರ್, ಮುಂದಿನ ಸಾಲಿನ ನಿಯೋಜಿತ ಅಧ್ಯಕ್ಷರಾದ ರಾಕೇಶ್ ಪಟೇಲ್ ಉಪಸ್ಥಿತರಿದ್ದರು. ಇದೇ ಸಂದರ್ಭ ಮಾಜಿ ಸೈನಿಕ ಡೊಂಬಯ್ಯ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.