ಕುಶಾಲನಗರ, ಜ. 12: ಕಾವೇರಿ ನದಿ ಸಂರಕ್ಷಣಾ ಕಾರ್ಯದಲ್ಲಿ ಮಹಿಳೆಯರು ಕೈಜೋಡಿಸಿದಲ್ಲಿ ಸ್ವಚ್ಛ ಕಾವೇರಿ ನಿರ್ಮಾಣ ಸಾಧ್ಯ ಎಂದು ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹಮ್ಮಿಕೊಂಡ `ಸ್ವಚ್ಛ ಕಾವೇರಿ' ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಂದಿನ ಪೀಳಿಗೆಗೆ ಕಾವೇರಿ ನದಿಯ ಉಳಿವು ಆಗಬೇಕಾದಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ನದಿಯ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸ ಬೇಕಾಗಿದೆ. ನದಿಯ ಬಳಕೆ ಮಾಡುವ ಜನತೆಗೆ ಅದರ ಅರಿವು ಮೂಡಿಸುವಲ್ಲಿ ಸಂಘ-ಸಂಸ್ಥೆಗಳು ಜಾಗೃತರಾಗಬೇಕಾಗಿದೆ ಎಂದರು.

ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಅರ್ಚಕ ಕೃಷ್ಣಮೂರ್ತಿ ಭಟ್ ಮಾತನಾಡಿ, ಕಳೆದ 5 ವರ್ಷಗಳಿಂದ ನದಿ ತಟದ ಜನರಿಗೆ ಧಾರ್ಮಿಕವಾಗಿ ನದಿಯ ಪಾವಿತ್ರ್ಯತೆ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಮಹಾ ಆರತಿ ಬೆಳಗುವ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ, ಇದೀಗ ನದಿ ತಟಗಳ ಸ್ವಚ್ಛತೆ ಬಗ್ಗೆ ಚಿಂತನೆ ಹರಿಸಿರುವದು ಶ್ಲಾಘನೀಯ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ನದಿ ತಟಗಳಲ್ಲಿ ಬಟ್ಟೆ ಒಗೆಯುವ ಮೂಲಕ ಕಲುಷಿತಗೊಳುತ್ತಿದ್ದು, ಮಹಿಳೆಯರಿಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕಾಗಿದೆ. ಹಲವು ರೀತಿಯಲ್ಲಿ ನದಿಯ ಒಡಲು ಮಾಲಿನ್ಯಗೊಳ್ಳುತ್ತಿದ್ದು, ಈ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮಿತಿ ಚಿಂತನೆ ಹರಿಸಿದೆ. ಕಾವೇರಿಯ ಮೂಲಸ್ಥಾನ ತಲಕಾವೇರಿಯಿಂದ ಶಿರಂಗಾಲ ತನಕ ಗ್ರಾಮ ಮಟ್ಟದಲ್ಲಿ ನದಿ ಜಾಗೃತಿ ಸಮಿತಿ ರಚಿಸುವ ಮೂಲಕ ಪ್ರತಿ ತಿಂಗಳ ಹುಣ್ಣಿಮೆಯಂದು ನದಿ ಸ್ವಚ್ಚತೆಯೊಂದಿಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭ ನದಿ ತಟದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯರಿಗೆ ಗುಲಾಬಿ ಹೂ ನೀಡುವ ಮೂಲಕ ನದಿ ಸಂರಕ್ಷಣೆಯ ಬಗ್ಗೆ ಕೈಜೋಡಿಸುವಂತೆ ಜಾಗೃತಿ ಮೂಡಿಸಲಾಯಿತು. ನಂತರ ಕಾವೇರಿ ನದಿ ತಟದಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಯಿತು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಡಿ.ಆರ್.ಸೋಮಶೇಖರ್, ವೈಶಾಖ್, ಜಗದೀಶ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕ ಚಂದ್ರಶೇಖರ್, ಸೇವಾ ಪ್ರತಿನಿಧಿಗಳಾದ ಕಲಾವತಿ, ಚಂದ್ರಾವತಿ, ಡಾಟಿ, ವಿಜಯಲಕ್ಷ್ಮಿ, ಕೀರ್ತನಾ, ಗುಡ್ಡೆಹೊಸೂರು ಒಕ್ಕೂಟದ ಯಶೋಧ, ಸುನಿತಾ, ನಂಜರಾಯಪಟ್ಟಣ ಒಕ್ಕೂಟದ ಲಿಲ್ಲಿ, ನೆಲ್ಲಿಹುದಿಕೇರಿ ಒಕ್ಕೂಟದ ಪ್ರಮೀಳಾ, ವಾರಿಜಾ ಭರತ್ ಸೇರಿದಂತೆ ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಸದಸ್ಯರು ಇದ್ದರು.