ಸೋಮವಾರಪೇಟೆ, ಜೂ. 10: ಕೊಡಗಿನಲ್ಲಿ ಮಲೆನಾಡು ಗಿಡ್ಡ ತಳಿಯ ಅಭಿವೃದ್ಧಿಗೆ ಈಗಾಗಲೇ ರೂ. 5 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದ್ದು, ಈ ಸಂಬಂಧಿತ ಕೆಲಸ ಕಾರ್ಯಗಳು ತಕ್ಷಣ ಪ್ರಾರಂಭವಾಗಲಿದೆ ಎಂದು ರಾಜ್ಯ ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖಾ ಸಚಿವ ಎ. ಮಂಜು ತಿಳಿಸಿದರು.

ಇಲ್ಲಿನ ನಗರೂರು ಗ್ರಾಮದಲ್ಲಿರುವ ಮನೆಗೆ ಆಗಮಿಸಿದ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ, ಮಲೆನಾಡು ಗಿಡ್ಡ ವಿಶೇಷ ತಳಿಯನ್ನು ಕೊಡಗಿನ ಕೂಡಿಗೆ ಮತ್ತು ಮದಲಾಪುರ ಫಾರಂಗಳಲ್ಲಿ ಅಭಿವೃದ್ಧಿಪಡಿಸಲಾಗುವದು. ಫಾರಂಗಳಲ್ಲಿ ಮಲೆನಾಡು ಗಿಡ್ಡ ತಳಿಯನ್ನು ಬ್ರೀಡ್ ಮಾಡಿ ರೈತರಿಗೆ ಒದಗಿಸಲಾಗುವದು.

ಇದು ಎಲ್ಲಾ ಕಾಲಕ್ಕೂ ಹೊಂದುವ ತಳಿಯಾಗಿದ್ದು, ಕೊಡಗಿನ ಹವಾಮಾನ ತಳಿಯ ಅಭಿವೃದ್ಧಿಗೆ ಪೂರಕವಾಗಿದೆ. ಗ್ರಾಮೀಣ ಭಾಗದಲ್ಲೂ ನಾಟಿ ಹಸುವಿನ ಹಾಲು ಉತ್ಪಾದನೆಯಾದರೆ ಸ್ಥಳೀಯ ಮಕ್ಕಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನೆಲೆ ಮಲೆನಾಡು ಗಿಡ್ಡ ತಳಿಯ ಅಭಿವೃದ್ಧಿಗೆ ಇಲಾಖೆ ಕ್ರಮ ಕೈಗೊಂಡಿದೆ ಎಂದರು.

ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಎಲ್ಲೆಡೆ ಹಸಿರು ಕಂಗೊಳಿಸುತ್ತಿದೆ. ಜಾನುವಾರುಗಳಿಗೆ ಮೇವು ಸಿಗುತ್ತಿದೆ. ಆಹಾರಕ್ಕೆ ಕೊರತೆಯಿಲ್ಲ. ಜಾನುವಾರುಗಳಿಗೆ ತಿಂಗಳಿಗೊಮ್ಮೆ ರೋಗ ನಿರೋಧಕ ಲಸಿಕೆ ಹಾಕುತ್ತಿದ್ದೇವೆ. ಪ್ರಸ್ತುತ 11ನೇ ಸುತ್ತು ಮುಗಿದಿದ್ದು, ಒಟ್ಟು ಶೇ. 97 ರಷ್ಟು ಸಾಧನೆಯಾಗಿದೆ ಎಂದರು. ರಾಜ್ಯದಾದ್ಯಂತ ಪಶು ವೈದ್ಯರ ಕೊರತೆ ನೀಗಿದೆ. ವೈದ್ಯರುಗಳ ಹುದ್ದೆ ಭರ್ತಿಯಾಗಿದ್ದು, ನಿಯೋಜನೆ ಮಾತ್ರ ಬಾಕಿ ಉಳಿದಿದೆ. ಕೆಲ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳಿಗೂ ವೈದ್ಯರನ್ನು ನಿಯೋಜಿಸಲಾಗುವದು ಎಂದು ಎ. ಮಂಜು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ವಕ್ತಾರ ಮಂಜುನಾಥ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಉದಯಶಂಕರ್, ಕಾಂಗ್ರೆಸ್‍ನ ಬ್ಲಾಕ್ ಪರಿಶಿಷ್ಟ ಜಾತಿ, ವರ್ಗಗಳ ಸಮಿತಿ ಅಧ್ಯಕ್ಷ ಟಿ.ಈ. ಸುರೇಶ್, ಪ್ರಮುಖರಾದ ಮೂಡಗದ್ದೆ ದಾಮೋದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.