ವೀರಾಜಪೇಟೆ, ಅ. 2: ಭಾರತದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಹಿಂದುಳಿದವರು, ದಲಿತ ವರ್ಗದವರ ಏಳಿಗೆಗಾಗಿ ಶ್ರಮಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಯೋಜನೆಗಳನ್ನು ರೂಪಿಸಿದ್ದರು. ಇದರ ಪರಿಣಾಮ ವಾಗಿ ದಲಿತರು ಸಮಾಜದಲ್ಲಿ ಸಮಾನತೆ ಕಾಯ್ದುಕೊಳ್ಳುವದ ರೊಂದಿಗೆ ಒಗ್ಗಟ್ಟಿನ ಸಂಕೇತವಾದ ಗೌರಿ-ಗಣೇಶೋತ್ಸವದ ಆಚರಣೆಗೆ ಆದ್ಯತೆ ನೀಡಿರುವದು ಉತ್ತಮ ಕಾರ್ಯ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಚೆನ್ನಯ್ಯನಕೋಟೆ ಸಿದ್ಧಿ ವಿನಾಯಕ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಗೌರಿ-ಗಣೇಶೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಕೇತ್ ಅವರು, ಧಾರ್ಮಿಕತೆಯ ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಒಗ್ಗಟ್ಟಾಗಿ ಆಚರಿಸುವದರಿಂದ ಪ್ರತಿಯೊಬ್ಬರಲ್ಲೂ ಬಾಂಧವ್ಯದ ಸಾಮರಸ್ಯ ಮೂಡಲಿದೆ. ಉತ್ಸವ ಹಬ್ಬಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಮ್ಮದಿ ನೆಲೆಸುವ ಸಾಧ್ಯತೆ ಇದೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ಪಕ್ಷದ ಜಿಲ್ಲಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿ, ಹಿಂದಿನ ಹಿರಿಯರು ಆಚರಿಸಿಕೊಂಡು ಬಂದಿದ್ದ ಇತಿಹಾಸ ಪ್ರಸಿದ್ಧ ಗೌರಿ-ಗಣೇಶೋತ್ಸವವನ್ನು ಇಂದಿನ ಯುವಪೀಳಿಗೆ ಮುಂದುವರೆಸಿರುವದು ಪರಂಪರೆಯ ಧಾರ್ಮಿಕತೆಗೆ ಒತ್ತು ನೀಡಿದಂತೆ ಎಂದರು.

ಸಮಾರಂಭವನ್ನುದ್ದೇಶಿಸಿ ಸಮಿತಿಯ ಗೌರವ ಅಧ್ಯಕ್ಷ ರಾಜು, ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಹೆಚ್.ಸಿ. ಸಣ್ಣಯ್ಯ ಮಾತನಾಡಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ವಿ.ಪಿ. ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶೀಲಾ, ಶಿಲ್ಪಾ ಜನಾರ್ಧನ್, ತಾಲೂಕು ಪಂಚಾಯಿತಿ ಸದಸ್ಯೆ ಕಾವೇರಮ್ಮ ಉಪಸ್ಥಿತರಿದ್ದರು.

ಸಿದ್ಧಿ ವಿನಾಯಕ ದೇವಸ್ಥಾನದ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ರಾಜೇಶ್, ಉತ್ಸವ ಸಮಿತಿಯ ಅಧ್ಯಕ್ಷ ಪವಿತ್ರ, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಹಾಜರಿದ್ದರು. ಮನು ಕುಮಾರ್ ಸ್ವಾಗತಿಸಿದರೆ, ಕಿಶೋರ್ ನಿರೂಪಿಸಿದರು.

ಸಮಾರಂಭದ ನಂತರ ಮೈಸೂರಿನ ರವಿ ಮೆಲೋಡೀಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.