ಸೋಮವಾರಪೇಟೆ, ಜ. 11: ಎಳೆಯವಯಸ್ಸಿನಲ್ಲಿ ಬದ್ದತೆ ಹೊಂದಿದ ಮಕ್ಕಳು ಮಾತ್ರ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಬಾಲಮಂಗಳ ಪಾಕ್ಷಿಕದ ಸಂಪಾದಕ ನರೇಂದ್ರ ಪಾರೆಕಟ್ಟೆ ಅಭಿಪ್ರಾಯಿಸಿದರು.

ಕುಶಾಲನಗರದ ಎದುರ್ಕುಳ ಶಂಕರನಾರಾಯಣ ಭಟ್ ವೇದಿಕೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಓದುವ ಹಾಗೂ ಬರೆಯುವ ಅಭಿರುಚಿ ದಿನದಿಂದ ದಿನಕ್ಕೆ ವೃದ್ಧಿಯಾಗಬೇಕು. ಓದುವಿಕೆ ಎಂಬುದು ತಪಸ್ಸಾಗಿದ್ದು, ಅದರಲ್ಲಿ ತನ್ಮಯತೆಯಿಂದ ತೊಡಗಿಸಿ ಕೊಳ್ಳಬೇಕು. ಪ್ರತಿ ಸಾಧಕರ ಹಿಂದೆ ಬದ್ದತೆಯೇ ಅಡಿಪಾಯವಾಗಿದ್ದು, ಯಾರು ಎಳೆಯವಯಸ್ಸಿನಲ್ಲಿ ಬದ್ಧತೆಯೊಂದಿಗೆ ಕೆಲಸ ಮಾಡುತ್ತಾರೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ನಾವುಗಳೂ ಓದಬೇಕು; ನಮ್ಮವರಿಗೂ ಓದುವಂತೆ ಪ್ರೇರೇಪಿಸಬೇಕು ಎಂದು ನುಡಿದ ನರೇಂದ್ರ ಅವರು, ಕೊಡಗು ಜಿಲ್ಲೆ ಸಾಹಿತ್ಯಿಕ ಕ್ಷೇತ್ರದಲ್ಲಿ ನಂ.1 ಪಟ್ಟ ಅಲಂಕರಿಸಬೇಕಾದರೆ ಕೊಡಗಿನ ಮಕ್ಕಳು ಇನ್ನಷ್ಟು ಸಾಹಿತ್ಯಾಭಿರುಚಿ ಅಳವಡಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗದೇ ಜೀವನಲ್ಲಿ ಸಾಹಿತ್ಯಿಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿದ್ದ ಹಿರಿಯ ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ ಮಾತನಾಡಿ, ಮಕ್ಕಳಲ್ಲಿ ವಿವೇಚನೆ, ಕಲಿಯುವ ಕುತೂಹಲ, ಅಧ್ಯಯನಶೀಲತೆಯ ಗುಣ ಅಡಗಿರಬೇಕು ಎಂದರು. ಮತ್ತೋರ್ವ ಸಾಹಿತಿ ಶಿವದೇವಿ ಅವನೀಶ್ಚಂದ್ರ ಮಾತನಾಡಿ, ಮಕ್ಕಳ ಮಗುತನವನ್ನು ಹಿರಿಯರು ಗೌರವಿಸಬೇಕು. ಸಾಮಾಜಿಕ ಪ್ರಭಾವಗಳು ಮಕ್ಕಳ ಮೇಲೆ ಅತೀ ಬೇಗ ಪರಿಣಾಮ ಬೀರಲಿದ್ದು, ಸಮಾಜ ಇದನ್ನು ಅರಿತು ಮಕ್ಕಳಲ್ಲಿ ಸಕಾರಾತ್ಮಕ ಭಾವ ಮೂಡುವಂತೆ ಮಾಡಬೇಕು ಎಂದರು.

ಬದಲಾಗುತ್ತಿರುವ ಜೀವನ ಶೈಲಿ ವಿಷಯದ ಬಗ್ಗೆ ವಿದ್ಯಾರ್ಥಿ ಕೃತಜ್ಞ ಬೆಸೂರು, ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ವಿಧಾನಗಳು ವಿಷಯದ ಬಗ್ಗೆ ಸಂಪಾಜೆಯ ಆಶಯ, ಮಕ್ಕಳಲ್ಲಿ ನಾಯಕತ್ವ ಬೆಳವಣಿಗೆ ವಿಷಯದ ಬಗ್ಗೆ ಸೋಮವಾರಪೇಟೆಯ ವಿ.ಡಿ. ಸಿಂಚನ ಅವರುಗಳು ವಿಚಾರ ಮಂಡಿಸಿದರು. ವೇದಿಕೆಯಲ್ಲಿ ಜಿಲ್ಲೆಯ ಸಾಹಿತಿಗಳಾದ ಬೈತಡ್ಕ ಜಾನಕಿ, ಜಲಾ ಕಾಳಪ್ಪ, ಸಮ್ಮೇಳನಾಧ್ಯಕ್ಷ ರಾಜಶೇಖರ್, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಅವರುಗಳು ಉಪಸ್ಥಿತರಿದ್ದರು.