ಮಡಿಕೇರಿ, ಆ. 28: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ನಗರದ ಸಂತ ಮೈಕಲರ ಪ್ರೌಢಶಾಲೆಯಲ್ಲಿ ಇಕೋ-ಕ್ಲಬ್ ವತಿಯಿಂದ ‘ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ’ ಕುರಿತಂತೆ ಪರಿಸರ ಜಾಗೃತಿ ಆಂದೋಲನ ಏರ್ಪಡಿಸಲಾಗಿತ್ತು.

‘ಪರಿಸರಸ್ನೇಹಿ’ ಗಣೇಶ ಮೂರ್ತಿ ಸ್ಥಾಪನೆಯ ಅಗತ್ಯತೆ’ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್‍ನ ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕರೂ ಆದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್‍ನ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಬಳಕೆ ಮಾಡುವ ಉದ್ದೇಶದಿಂದ ಇಂತಹ ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

‘ಹಸಿರೆಡೆಗೆ ನಡೆ- ಗ್ರೋ ಗ್ರೀನ್, ಗ್ರೀನ್ ಯಾತ್ರಾ’ ಎಂಬ ಕಾರ್ಯಕ್ರಮ ದಡಿ ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ.)ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ತಯಾರು ಮಾಡುವದರ ವಿರುದ್ಧ ಜನಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪರಿಸರ ಪ್ರೇಮಿ ಪ್ರೇಮಕುಮಾರ್ ತಿಳಿಸಿದರು.

‘ಪರಿಸರ ಸ್ನೇಹಿ ಗಣೇಶಮೂರ್ತಿ ರಚನೆ’ ಕುರಿತಂತೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಕ್ಲೇ ಮಾಡಲಿಂಗ್ ಸ್ಪರ್ಧೆಗಳಲ್ಲಿ ವಿಜೇತಗೊಂಡವರಿಗೆ ಬಹುಮಾನ ವಿತರಿಸಿ ಮಾತನಾಡಿದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಪ್ರಾಂಶುಪಾಲ ಎಸ್. ದೊಡ್ಡಮಲ್ಲಪ್ಪ, ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವದರೊಂದಿಗೆ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಮುಂದಾಗಬೇಕು ಎಂದರು.

‘ಪರಿಸರ ಸ್ನೇಹಿ ಗಣೇಶ ಆಚರಣೆ’ ಕುರಿತಂತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಸಹಾಯಕ ಪರಿಸರ ಅಧಿಕಾರಿ ಉಮ್ಮೆ ಹಮೀದ ಮಾತನಾಡಿ, ಪ್ರತಿಯೊಬ್ಬರೂ ಸ್ವಾಭಾವಿಕ ಪರಿಸರಕ್ಕೆ ಯಾವದೇ ಧಕ್ಕೆಯನ್ನು ಉಂಟುಮಾಡದಂತೆ ಗಣೇಶ ಚತುರ್ಥಿಯನ್ನು ಆಚರಿಸಬೇಕಿದೆ. ನಾಗರಿಕರು ಗಣೇಶ ಮೂರ್ತಿಗಳನ್ನು ನದಿ, ಕೆರೆ ಮತ್ತಿತರ ಜಲಮೂಲಗಳಿಗೆ ಧಕ್ಕೆಯಾಗದಂತೆ ನಿಗದಿಪಡಿಸಿರುವ ಸ್ಥಳದಲ್ಲಿ ಮಾತ್ರ ವಿಸರ್ಜಿಸಬೇಕಿರುತ್ತದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಕೆ.ಎ. ಜಾನ್ಸನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅನುದಾನಿತ ಪ್ರೌಢಶಾಲಾ ನೌಕರರ ಸಂಘದ ಅಧ್ಯಕ್ಷ ಡಿ.ಎ. ಮೋಹನ್, ಮಡಿಕೇರಿ ತಾಲೂಕು ಅನುದಾನಿತ ಪ್ರೌಢಶಾಲಾ ನೌಕರರ ಸಂಘದ ಅಧ್ಯಕ್ಷ ವಿಲ್ಫ್ರೆಡ್ ಕ್ರಾಸ್ತಾ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕ ವಿಲ್ಫ್ರೆಡ್ ಕ್ರಾಸ್ತಾ ನಿರ್ವಹಿಸಿದರು.

ಸ್ಪರ್ಧಾ ವಿಜೇತರು: ಕಾರ್ಯಕ್ರಮದ ಅಂಗವಾಗಿ ‘ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಅಗತ್ಯ ಕುರಿತಂತೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಡಬ್ಯ್ಲೂ.ಪಿ. ಶ್ರವಣ (ಪ್ರಥಮ), ಹೆಚ್.ಜಿ. ಅಪೂರ್ವ (ದ್ವಿತೀಯ), ಎಂ. ಪ್ರತಾಪ್ (ತೃತೀಯ) ಬಹುಮಾನ ಪಡೆದರು ಹಾಗೂ ‘ಪರಿಸರ ಸ್ನೇಹಿ’ ಗಣೇಶ ವಿಗ್ರಹ ತಯಾರಿಕೆ ಕುರಿತು ಏರ್ಪಡಿಸಿದ್ದ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಪ್ರಜ್ವಲ್ (ಪ್ರಥಮ), ದಿಲನ್ (ದ್ವಿತೀಯ) ಮತ್ತು ವಿಘ್ನೇಶ್ ಮತ್ತು ಚೇತನ್ (ತೃತೀಯ) ಬಹುಮಾನ ಪಡೆದರು.

ನಂತರ ನಡೆದ ಪರಿಸರ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಿ ಪರಿಸರ ಉಳಿಸಿ, ಹಸಿರೇ ಉಸಿರು, ನೀರನ್ನು ಮಿತವಾಗಿ ಬಳಸಿ, ಪರಿಸರ ಸ್ನೇಹಿ ಬೈಸಿಕಲ್ ಬಳಸಿ ಪರಿಸರ ಉಳಿಸಿ ಎಂಬಿತ್ಯಾದಿ ಪರಿಸರ ಘೋಷಣೆಗಳನ್ನು ಕೂಗಿದರು.