ಮಡಿಕೇರಿ, ಜೂ. 12 : ಕೊಡಗು ಜಿಲ್ಲೆಯಲ್ಲಿ ಸುಮಾರು ಒಂದೂವರೆ ಲಕ್ಷ ಜನಸಂಖ್ಯೆ ಹೊಂದಿರುವ ತುಳು ಭಾಷಿಕರು ಭಾಷಾಭಿಮಾನವನ್ನು ಮೂಡಿಸಿ ಕೊಳ್ಳುವದರೊಂದಿಗೆ ಸಂಸ್ಕøತಿಯ ಬೆಳವಣಿಗೆಗೆ ಶ್ರಮಿಸಬೇಕೆಂದು ತುಳುವೆರೆನ ಜನಪದ ಕೂಟದ ಜಿಲ್ಲಾ ಸಂಚಾಲಕ ಶ್ರೀಧರ್ ನೆಲ್ಲಿತ್ತಾಯ ಕರೆ ನೀಡಿದ್ದಾರೆ.

ನಗರದ ಬಾಲಭವನದಲ್ಲಿ ನಡೆದ ತುಳುವೆರೆನÀ ಜನಪದ ಕೂಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕರಾವಳಿ ಪ್ರದೇಶದ ಸಂಸ್ಕøತಿ ತುಳು ಭಾಷಿಕರದ್ದಾಗಿದ್ದು, ಶ್ರೀಮಂತ ಸಂಸ್ಕøತಿ ನಶಿಸದಂತೆ ಕಾಯ್ದುಕೊಳ್ಳಬೇಕೆಂದರು. ಇತ್ತೀಚಿನ ದಿನಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ವ್ಯಾಮೋಹದಿಂದ ಮಾತೃ ಭಾಷೆಯಾದ ತುಳುವನ್ನು ಮರೆಯಲಾಗುತ್ತಿದೆ. ಮುಂದಿನ ಪೀಳಿಗೆಗೆ ಈ ವಿಶಿಷ್ಟ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸುವ ಕಾರ್ಯ ವಾಗಬೇಕಿದೆ. ಕಡಿಮೆ ಜನಸಂಖ್ಯೆಯಿರುವ ಬೇರೆ ಜನಾಂಗಗಳು ಜಿಲ್ಲೆಯಲ್ಲಿ ಸಂಘಟಿತರಾಗುತ್ತಿದ್ದಾರೆ. ಆದರೆ ಸುಮಾರು ಒಂದೂವರೆ ಲಕ್ಷ ಜನಸಂಖ್ಯೆಯಿರುವ ತುಳು ಬಾಂಧವರ ವೈಭವವನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಕೂಟವನ್ನು ರಚಿಸಲಾಗಿದ್ದು, ಉತ್ತಮ ಸಂಘಟನೆ ಯೊಂದು ರೂಪು ಗೊಂಡಂತಾಗಿದೆ. ಯಾವದೇ ಕಾರಣಕ್ಕೂ ರಾಜಕೀಯದ ಪ್ರವೇಶವಾಗಬಾರದು ಎಂದು ಶ್ರೀಧರ್ ನೆಲ್ಲಿತ್ತಾಯ ಸಲಹೆ ನೀಡಿದರು.

ಕೂಟದ ಜಿಲ್ಲಾ ಗೌರವ ಸಲಹೆಗಾರರಾದ ಜಯಂತಿ ಆರ್.ಶೆಟ್ಟಿ ಮಾತನಾಡಿ, ಒಂದೇ ಭಾಷಿಕರಾದ ಏಳು ಸಮುದಾಯದವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವದು ಉತ್ತಮ ಬೆಳವಣಿಗೆ. ಜನಾಂಗ ಬಾಂಧವರು ತುಳು ಆಚಾರ - ವಿಚಾರದ ಉಳಿವಿಗೆ ಶ್ರಮಿಸಬೇಕು. ತುಳು ಮಾತನಾಡುವವರಾದ ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ಸಂಘಟಿತರಾಗಿ ಇತರರಿಗೆ ಮಾದರಿಯಾಗಿ ಬಾಳಬೇಕೆಂದು ಕರೆ ನೀಡಿದರು.

ಮೊಗೆರ ಸಮಾಜದ ಜಿಲ್ಲಾಧ್ಯಕ್ಷ ಪಿ.ಎಂ. ರವಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ತುಳು ಬಾಂಧವರ ಸಂಘಟನೆಯೊಂದನ್ನು ರಚಿಸುವದು ಹಲವು ವರ್ಷಗಳ ಕನಸಾಗಿತ್ತು. ಆದರೆ ಕನಸು ಇಂದು ನನಸಾಗಿದ್ದು, ತುಳು ಭಾಷಿಕರನ್ನು ಸಂಘಟಿಸುವ ಕಾರ್ಯ ಸಂಘಟನೆಯಿಂದ ಆಗಬೇಕಿದೆ ಎಂದರು.

ಕಾರ್ಯಕ್ರಮವನ್ನು ಕೂಟದ ಸಂಸ್ಥಾಪಕಾಧ್ಯಕ್ಷ ಶೇಖರ್ ಭಂಡಾರಿ ಉದ್ಘಾಟಿಸಿದರು.

ಬಂಟರ ಸಮಾಜದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ, ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಬಿ.ವೈ. ಆನಂದರಘು, ಕುಲಾಲ್ ಸಮಾಜದ ಅಧ್ಯಕ್ಷ ನಾಣಯ್ಯ ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ರಮೇಶ್ ಆಚಾರ್ಯ, ಬಾಹ್ಮಣ ಸಮಾಜದ ಅಧ್ಯಕ್ಷ ಗೊಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.