ಸೋಮವಾರಪೇಟೆ, ಅ. 31: ಇಲ್ಲಿನ ರೋಟರಿ ಸೋಮವಾರಪೇಟೆ ಹಿಲ್ಸ್‍ಗೆ ನೂತನ ಸದಸ್ಯರಾಗಿ ಸೇರ್ಪಡೆ ಗೊಂಡÀ ಅಂತರ್ರಾಷ್ಟ್ರೀಯ ಹಾಕಿ ಆಟಗಾರÀ ಎಸ್.ವಿ. ಸುನಿಲ್ ಅವರನ್ನು ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.ಇಲ್ಲಿನ ಸಪಾಲಿ ಫ್ಯಾಮಿಲಿ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತನ್ನನ್ನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆಸಿದ ಸೋಮವಾರಪೇಟೆಗೆ ಚಿರಋಣಿಯಾಗಿರುತ್ತೇನೆ ಎಂದರು. ತನ್ನ ಕ್ರೀಡಾಲೋಕದ ಯಶಸ್ಸಿಗೆ ಇಲ್ಲಿನ ಬ್ಲೂ ಸ್ಟಾರ್ ಹಾಕಿ ಸಂಸ್ಥೆಯೂ ಕಾರಣವಾಗಿದ್ದು, ಅದರ ಬಹುತೇಕ ಸದಸ್ಯರುಗಳು ಇಲ್ಲಿನ ರೋಟರಿ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಂತೆ ತಾನೂ ಕೂಡ ಸದಸ್ಯ ನಾಗಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಪಂದ್ಯಾಟದಲ್ಲಿ ತಾನೂ ಪಾಲ್ಗೊಳ್ಳುತ್ತಿದ್ದು, ವಿಶ್ವಕಪ್ ಗೆದ್ದು ತರುವದಾಗಿ ಭರವಸೆ ನೀಡಿದ ಅವರು, ಸರ್ವರ ಆಶೀರ್ವಾದ ಕೋರಿದರು.

ಸುನಿಲ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ ರೋಟರಿ ಸಂಸ್ಥೆಯ ಮಾಜಿ ಸಹಾಯಕ ರಾಜ್ಯಪಾಲ ಬಿ.ಎಸ್. ಸದಾನಂದ್ ಮಾತನಾಡಿ, ಅಂತರ್ರಾಷ್ಟ್ರೀಯ ಹಾಕಿ ಪಟುವಾಗಿರುವ ಎಸ್.ವಿ. ಸುನಿಲ್ ಅತ್ಯಂತ ವೇಗದ ಮುನ್ನಡೆ ಆಟಗಾರರೂ ಆಗುವ ಮೂಲಕ ತಮ್ಮ ಜಿಲ್ಲೆಯ ಕೀರ್ತಿಯನ್ನು ಉತ್ತುಂಗ ಕ್ಕೇರಿಸಿದ್ದಾರೆ. ಅವರು ವಿಶ್ವದ ವಿವಿಧೆಡೆಗಳಲ್ಲಿ ಪಂದ್ಯಾಟಕ್ಕಾಗಿ ತೆರಳುತ್ತಿದ್ದು, ಇದೀಗ ರೋಟರಿ ಸದಸ್ಯರಾಗುವ ಮೂಲಕ ವಿಶ್ವ ಮಟ್ಟದಲ್ಲಿ ಒಲಂಪಿಯನ್‍ನೊಂದಿಗೆ ರೋಟೇರಿಯನ್ ಆಗಿ ಕೂಡ ಗೌರವ ಪಡೆಯಲಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಹಿಲ್ಸ್‍ನ ಅಧ್ಯಕ್ಷ ಭರತ್ ಭೀಮಯ್ಯ ಮಾತನಾಡಿ, ವಿಶ್ವದಲ್ಲಿ ಒಲಂಪಿಯನ್ ಆಗಿ ಕೀರ್ತಿ ಪಡೆದಿರುವ ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ರೋಟರಿ ಸದಸ್ಯತ್ವ ಪಡೆಯುವ ಮೂಲಕ ನಮ್ಮ ಹಿಲ್ಸ್‍ನ ಗೌರವವನ್ನು ಹೆಚ್ಚಿಸಿದ್ದಾರೆ. ಇವರನ್ನು ರೋಟರಿ ಸಂಸ್ಥೆಗೆ ಪರಿಚಯಿಸಿದ ಎಸ್.ಬಿ. ಯಶ್ವಂತ್ ಅವರನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ರೋಟರಿ ಹಿಲ್ಸ್ ಕಾರ್ಯದರ್ಶಿ ವನಮಾಲಿ ಹೆಬ್ಬಾರ್, ನಿಯೋಜಿತ ಅಧ್ಯಕ್ಷ ಡಾ. ರಾಖೇಶ್ ಪಟೇಲ್ ಉಪಸ್ಥಿತರಿದ್ದರು.