ಸೋಮವಾರಪೇಟೆ, ಜೂ. 8: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಲಯ ಬಳಿಯ ನಿವಾಸಿ ಕಿಟ್ಟ ಮತ್ತು ಚಂದ್ರಾವತಿ ದಂಪತಿಯ ಕುಟುಂಬಕ್ಕೆ ಕಳಪೆ ಗುಣಮಟ್ಟದ ಶೌಚಾಲಯ ನಿರ್ಮಿಸಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ದಲಿತ ವರ್ಗಕ್ಕೆ ಸೇರಿದ ದಂಪತಿಗೆ ಪಂಚಾಯಿತಿಯಿಂದ ಶೌಚಾಲಯ ನಿರ್ಮಿಸುವದಾಗಿ ಮುಖಂಡರೋರ್ವರು ತಿಳಿಸಿ ಕಳಪೆಯಾಗಿ ಶೌಚಾಲಯ ನಿರ್ಮಿಸಿದ್ದಾರೆ. ಗೋಡೆಗಳು ಈಗಾಗಲೇ ಬೀಳುವ ಹಂತಕ್ಕೆ ತಲಪಿದ್ದು, ಶೌಚಾಲಯದ ಗುಂಡಿಗೆ ಪೈಪ್ ಅಳವಡಿಸಿಲ್ಲ. ಛಾವಣಿಯನ್ನೂ ನಿರ್ಮಿಸಿಲ್ಲ. ಆದರ ಹಣವನ್ನು ಮಾತ್ರ ಡ್ರಾ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಹಣವನ್ನು ವಸೂಲಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಐಗೂರು ಗ್ರಾಮ ಪಂಚಾಯಿತಿಯ ಈ ಕುಟುಂಬಕ್ಕೆ ನಿರ್ಮಿಸಿರುವ ಕಳಪೆ ಶೌಚಾಲಯದ ಬಗ್ಗೆ ‘ಶಕ್ತಿ’ಯಲ್ಲಿ ಸಚಿತ್ರ ವರದಿ ಪ್ರಕಟವಾಗಿದ್ದು, ತಕ್ಷಣ ಗುಣಮಟ್ಟದ ಶೌಚಾಲಯ ನಿರ್ಮಿಸಬೇಕು. ತಪ್ಪಿದಲ್ಲಿ ತಾ.ಪಂ. ಕಚೇರಿ ಹಾಗೂ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಎಚ್ಚರಿಸಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭ ಕರವೇ ಪದಾಧಿಕಾರಿಗಳಾದ ಮಂಜುನಾಥ್, ಕೆ.ಪಿ. ರವೀಶ್, ಭರತ್, ಕಿರಣ್‍ಕುಮಾರ್, ಕಳಪೆ ಶೌಚಾಲಯ ಹೊಂದಿರುವ ಫಲಾನುಭವಿ ಚಂದ್ರಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.