ಮಡಿಕೇರಿ, ಜು. 12: ಕೊಡಗು ಜಿಲ್ಲಾ ಬಿಜೆಪಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿ ಗಳನ್ನು ಆಯ್ಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರನ್ನು ಪ್ರಶ್ನಿಸಿದ ಬಿಜೆಪಿ ಹಿರಿಯ ಮುಖಂಡ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಅವರು ಅಸಮಾಧಾನಿತರಾಗಿ ಸಭೆಯಿಂದ ಹೊರ ನಡೆದ ಪ್ರಸಂಗ ನಡೆದಿದೆ.ನಿನ್ನೆ ವೀರಾಜಪೇಟೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ದೇವಯ್ಯ ಅವರು, ಅಧ್ಯಕ್ಷರನ್ನು ಯಾವ ಮಾನದಂಡದ ಆಧಾರದಲ್ಲಿ ಆಯ್ಕೆ ಮಾಡಿದ್ದೀರಿ, ಹಲವಷ್ಟು ಆಕಾಂಕ್ಷಿಗಳಿರುವಾಗ ಯಾವದೇ ಮಾತುಕತೆ ನಡೆಸದೆ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನೇಮಕಾತಿ ಮಾಡಿರುವ ಬಗ್ಗೆ ರಾಜ್ಯ ಉಪಾಧ್ಯಕ್ಷ ಸಿ.ಟಿ. ರವಿ ಅವರನ್ನು ಪ್ರಶ್ನಿಸಿದರು. ಕಾರ್ಯಕರ್ತರನ್ನು ಕಡೆಗಣನೆ ಮಾಡಿ ಏಕಪಕ್ಷೀಯವಾಗಿ ನೇಮಕಾತಿ ಮಾಡಿರುವದು ಸರಿನಾ? ಇದರಿಂದ ಪಕ್ಷಕ್ಕೆ ತೊಂದರೆಯುಂಟಾಗಲಿದೆ, ಪಕ್ಷ ಹಾಳಾಗಲಿದೆ. ಇದಕ್ಕೆ ನಾಯಕರೇ ಹೊಣೆಗಾರರಾಗಬೇಕಾಗುತ್ತದೆ. ಈ ಬಗ್ಗೆ ಉತ್ತರ ನೀಡುವದಾದರೆ ಸಭೆಯಲ್ಲಿ ಕುಳಿತುಕೊಳ್ಳುತ್ತೇನೆ, ಇಲ್ಲವಾದಲ್ಲಿ ಹೊರ ಹೋಗುತ್ತೇನೆ ಎಂದು ಹೇಳಿದರು. ಪ್ರತಿಕ್ರಿಯಿಸಿದ ಸಿ.ಟಿ. ರವಿ ಅವರು ಸಭೆ ಮುಗಿದ ಬಳಿಕ ಉತ್ತರ ನೀಡುವದಾಗಿ ಹೇಳಿದಾಗ ಅಸಮಾಧಾನಿತರಾದ ದೇವಯ್ಯ ಎದ್ದು ಹೊರ ನಡೆದರು.

ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆಯಿಂದ ಗೊಂದಲವೇರ್ಪಟ್ಟಿದೆ. ತಾನೂ ಕೂಡ ಅಧ್ಯಕ್ಷ ಆಕಾಂಕ್ಷಿಯಾಗಿದ್ದು, ಸೌಜನ್ಯಕ್ಕಾದರೂ ವಿಚಾರಿಸಿಲ್ಲ. ಆಯ್ಕೆ ಬಗ್ಗೆ ಶಾಸಕರಿಗೂ ಮಾಹಿತಿಯಿಲ್ಲ. ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಇದನ್ನು ಸರಿಪಡಿಸದಿದ್ದರೆ ತಿರುಗಿಬೀಳುವದು ಶತಸಿದ್ಧ. ಆದರೆ ಯಾವದೇ ಪಕ್ಷವಿರೋಧಿ ಚಟುವಟಿಕೆ ನಡೆಸುವದಿಲ್ಲವೆಂದು ಹೇಳಿದರು.