ಶನಿವಾರಸಂತೆ, ಜೂ. 12: ವಾರದ ಸಂತೆಯಲ್ಲಿ ಶುಂಠಿ ಬೆಳೆಗೆ ನಿರೀಕ್ಷಿತ ದರ ದೊರೆಯದೇ ರೈತರು ಹತಾಶರಾದರು. ಶುಂಠಿಗೆ ಹೊರಜಿಲ್ಲೆ- ಹೊರ ರಾಜ್ಯಗಳಲ್ಲಿ ಅಪಾರ ಬೇಡಿಕೆ ಇದೆ. ಬೆಳಿಗ್ಗೆಯಿಂದಲೇ ಶುಂಠಿ ವ್ಯಾಪಾರ ಭರದಿಂದ ಸಾಗಿತ್ತು. ರೈತರು ಬೆಳಿಗ್ಗೆಯೇ ತಾವು ಬೆಳೆದ ರಿಗೋಡಿ ಹಾಗೂ ಮಾರನ್ ತಳಿಯ ಶುಂಠಿಯನ್ನು ವ್ಯಾಪಾರಕ್ಕೆ ತಂದಿದ್ದರು. 60 ಕೆ.ಜಿ. ತುಂಬಿದ ಚೀಲಕ್ಕೆ ರೂ. 2 ಸಾವಿರದಿಂದ ರೂ. 2,200ಕ್ಕೆ ವ್ಯಾಪಾರಿಗಳು ಖರೀದಿಸಿದರು. ಆದರೆ, ದರ ಕುಸಿತದಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದರು.ಈ ವರ್ಷ ಆರಂಭದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಇಳುವರಿ ತೀರಾ ಕಡಿಮೆಯಾಗಿದೆ. ಬೇಡಿಕೆ ಇದ್ದರೂ ಮಾರುಕಟ್ಟೆಗೆ ಕಡಿಮೆ ಉತ್ಪನ್ನ ಬಂದರೂ ಉತ್ತಮ ದರವಿಲ್ಲದೆ ರೈತರು ಕಂಗಾಲಾದರು.ಸಂತೆಯಲ್ಲಿ ಖರೀದಿಸುವ ಶುಂಠಿಯನ್ನು ವ್ಯಾಪಾರಿಗಳು ಬೆಂಗಳೂರು, ಕೇರಳ, ಚೆನ್ನೈ, ದೆಹಲಿ, ಅಹಮದಾಬಾದ್, ಪಂಜಾಬ್, ಹರಿಯಾಣ, ಕಾಶ್ಮೀರಕ್ಕೆ ರವಾನಿಸುತ್ತಾರೆ.

60 ಕೆ.ಜಿ. ತುಂಬಿದ ಚೀಲಕ್ಕೆ ರೂ. 3 ಸಾವಿರದಿಂದ 3,500ರವರೆಗೆ ದರ ದೊರೆಯುವ ನಿರೀಕ್ಷೆಯಿತ್ತು. ಈಗ ದೊರೆಯುತ್ತಿರುವ ದರದಿಂದ ಲಾಭವಿರಲಿ, ಅಸಲು ಗಿಟ್ಟುವದಿಲ್ಲ. ದರ ತಾರತಮ್ಯದಿಂದ ಬೇಸರವಾಗಿದೆ. ಗಂಟೆಗೊಂದು ದರ. ಮಧ್ಯವರ್ತಿಗಳ ಹಾವಳಿಯಿಂದ ತೊಂದರೆಯಾಗುತ್ತಿದೆ. ಮುಂಗಾರು ವಿಳಂಬದಿಂದಾಗಿ ಶುಂಠಿ ಇಳುವರಿ ಕಡಿಮೆಯಾಗಿದೆ. ಮುಂದೆ ಮಳೆ ಹೆಚ್ಚಾದರೆ ಕೊಳೆ ರೋಗವೂ ಬರುತ್ತದೆ. ರೈತರ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನುತ್ತಾರೆ. ಮಾದ್ರೆ ಗ್ರಾಮದ ಹೇಮಂತ್, ಅರುಣ್ ಮತ್ತಿತರ ರೈತರು.