ಸೋಮವಾರಪೇಟೆ, ಜೂ. 8: ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ತಮ್ಮ ನಿಧಿಯಿಂದ ಹಂತ ಹಂತವಾಗಿ ರೂ. 25 ಲಕ್ಷ ಅನುದಾನ ಒದಗಿಸುವದಾಗಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭರವಸೆ ನೀಡಿದ್ದಾರೆ ಎಂದು ಸಂಘದ ತಾಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಲ್ಲಿ ಕೇವಲ 13 ಮಕ್ಕಳಿಂದ ಪ್ರಾರಂಭವಾದ ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿಪೂರ್ವ ತರಗತಿಯವರೆಗೆ 850 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಅಭಿವೃದ್ಧಿಗೆ ಸಂಸದ ಪ್ರತಾಪ್ ಸಿಂಹ ಅವರು ರೂ. 35 ಲಕ್ಷ ಅನುದಾನ ನೀಡಿದ್ದು, ಇದರೊಂದಿಗೆ ನೂತನ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಅವರು ರೂ. 25 ಲಕ್ಷ ಅನುದಾನದ ಭರವಸೆ ನೀಡಿದ್ದಾರೆ ಎಂದರು.

ಕಡ್ಡಾಯ ಶಿಕ್ಷಣ ಕಾಯ್ದೆಯಡಿ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದು, ಪ್ರಸಕ್ತ ವರ್ಷ 50 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. ಸರ್ಕಾರದಿಂದ 3.74 ಲಕ್ಷ ಹಣ ಪಾವತಿಯಾಗಿದ್ದು ಇದೀಗ ರೂ 1.59 ಲಕ್ಷ ಹಣವನ್ನು ಸರ್ಕಾರಕ್ಕೆ ವಾಪಸ್ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮೌಖಿಕ ಆದೇಶ ಹೊರಡಿಸುತ್ತಿದ್ದಾರೆ. ಇದಕ್ಕೆ ಸಮರ್ಪಕ ಕಾರಣವನ್ನು ಸರ್ಕಾರ ನೀಡುತ್ತಿಲ್ಲ ಎಂದು ಗೋಷ್ಠಿಯಲ್ಲಿದ್ದ ಶಾಲೆಯ ಬಾತ್ಮೀದಾರ ಡಿ.ಪಿ. ಲಿಂಗರಾಜು ಹೇಳಿದರು. ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಪ್ರತಿ ವರ್ಷ ವಿದ್ಯಾಭ್ಯಾಸ ನೀಡಿದ್ದರೂ ಸಹ ಇದೀಗ ಹಣವನ್ನು ವಾಪಸ್ ಕೇಳುತ್ತಿರುವದು ಸಮಂಜಸವಲ್ಲ ಎಂದು ಅವರು ಪ್ರತಿಪಾದಿಸಿದರು.

ಗೋಷ್ಠಿಯಲ್ಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಸಿ.ಕೆ. ರಾಘವ, ಕಾರ್ಯದರ್ಶಿ ಎಂ.ಬಿ. ಗಣಪತಿ, ಖಜಾಂಚಿ ಸಿ.ಎಸ್. ಸುರೇಶ್ ಉಪಸ್ಥಿತರಿದ್ದರು.