ಶ್ರೀಮಂಗಲ, ಜೂ. 11: ಕೊಡಗು ಜಿಲ್ಲೆಯಲ್ಲಿ ಸಭೆ-ಸಮಾರಂಭಗಳು ನಡೆಯುವಾಗ ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆಯಾಗಿ, ರಸ್ತೆ ಸಂಚಾರಕ್ಕೆ ತಡೆಯಾಗುತ್ತಿದ್ದು, ತುರ್ತಾಗಿ ತೆರಳಬೇಕಾದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಇದನ್ನು ನಿಭಾಯಿಸುವ ಜವಾಬ್ದಾರಿಯನ್ನು ಸಭೆ ಸಮಾರಂಭ ಆಯೋಜಿಸುವವರೇ ಅಥವಾ ಸಂಬಂಧಿಸಿದ ಕಲ್ಯಾಣ ಮಂಟಪ, ಮಾಲೀಕರು ಹಾಗೂ ಸಮಾಜಗಳ ಆಡಳಿತ ಮಂಡಳಿಯೇ ತೆಗೆದುಕೊಂಡು ಸಾರ್ವಜನಿಕರಿಗೆ, ರಸ್ತೆ ಸಂಚಾರಕ್ಕೆ ಆಗುವ ತೊಂದರೆ ತಪ್ಪಿಸಬೇಕು ಎಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಮದುವೆ, ಸಭೆ-ಸಮಾರಂಭ, ರಾಜಕೀಯ ಪಕ್ಷಗಳ ಕಾರ್ಯಕ್ರಮ ಸಂದರ್ಭ ಸಾರ್ವಜನಿಕ ರಸ್ತೆಯ ಎರಡೂ ಬದಿಯಲ್ಲಿ ವಾಹನ ದಟ್ಟಣಿಯಿಂದ ವಾಹನ ನಿಲುಗಡೆಯಾಗಿರುತ್ತದೆ. ಇದರಿಂದ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳಿಗೆ ತೆರಳಲು ಸಾಧ್ಯವಾಗದೇ ತಾಸುಗಟ್ಟಲೆ ನಿಲ್ಲಬೇಕಾಗುತ್ತದೆ.

ತುರ್ತು ಸಂದರ್ಭ ಆ್ಯಂಬ್ಯುಲೆನ್ಸ್ ಇತ್ಯಾದಿಗಳಿಗೂ ಸಂಚರಿಸಲು ಇದರಿಂದ ತಡೆಯಾಗುತ್ತಿದೆ. ಸಾರ್ವಜನಿಕರಿಗೆ ತೆರಳಬೇಕಾದ ಸ್ಥಳಗಳಿಗೆ ನಿಗದಿತ ಸಮಯದಲ್ಲಿ ತಲಪಲು ಇದರಿಂದ ಸಾಧ್ಯವಾಗದೇ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ.

ಆದ್ದರಿಂದ ಸಭೆ-ಸಮಾರಂಭ ಆಯೋಜಿಸುವವರೇ ರಸ್ತೆ ಬದಿ ವ್ಯವಸ್ಥಿತ ವಾಹನ ನಿಲುಗಡೆಗೆ ಸಿಬ್ಬಂದಿ ನೇಮಿಸಿ, ಸಾರ್ವಜನಿಕ ವಾಹನ ಸಂಚಾರಕ್ಕೆ ರಸ್ತೆ ತಡೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.