ಮಡಿಕೇರಿ, ಜೂ. 7: ಪ್ರಸ್ತುತ ಮಳೆಗಾಲ ಸನ್ನಿಹಿತವಾಗುತ್ತಿರುವ ಲಕ್ಷಣ ಕಂಡು ಬರುತ್ತಿದ್ದು, ಮುಂದಿನ ವಾರಾರಂಭದಲ್ಲಿ ಜಿಲ್ಲೆಗೆ ಮುಂಗಾರು ಮಳೆಯಾಗುವ ಸಾಧ್ಯತೆಯಿದೆ. ತಾ. 10 ಅಥವಾ 11 ರಂದು ಕೇರಳವನ್ನು ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಕಳೆದ ಒಂದು ವಾರದಿಂದ ಆಗಾಗ್ಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಗುಡುಗು- ಮಿಂಚಿನ ಸಹಿತ ಮಳೆಯಾಗುತ್ತಿದೆ. ಮಳೆಯ ಋತು ಆರಂಭಗೊಂಡಿದ್ದು, ವಾಡಿಕೆಯ ಪ್ರಕಾರ ಕೇರಳವನ್ನು ಮುಂಗಾರು ಪ್ರವೇಶ ಮಾಡಿದ ನಂತರದ ಒಂದೆರಡು ದಿನಗಳಲ್ಲಿ ಕೊಡಗು ಜಿಲೆಯನ್ನು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆಯ ಮಾಹಿತಿಯಿದೆ.

ಪ್ರಸಕ್ತ ವರ್ಷ ಇಡೀ ಕೊಡಗು ಜಿಲ್ಲೆ ಪೂರ್ವ ಮುಂಗಾರು ಮಳೆಯ ಕೊರತೆಯಿಂದಾಗಿ ಬರಗಾಲದ ಸನ್ನಿವೇಶ ಎದುರಿಸಿದೆ.

ಜನವರಿಯಿಂದ ಇಲ್ಲಿಯ ತನಕ ಜಿಲ್ಲೆಗೆ 7.52 ಇಂಚು ಮಾತ್ರ ಮಳೆಯಾಗಿದೆ. ಈ ಬಾರಿ ಬೇಸಿಗೆಯಲ್ಲಿ ಮಳೆ ತೀರಾ ತಡವಾಗಿ ಬಿದ್ದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ತೀರಾ ಕಡಿಮೆಯಿದೆ. ಮಡಿಕೇರಿ ತಾಲೂಕಿಗೆ ಕಳೆದ ಸಾಲಿನಲ್ಲಿ ಜನವರಿಯಿಂದ ಇಲ್ಲಿಯತನಕ 19.24 ಇಂಚು ಮಳೆ ಬಿದ್ದಿದ್ದರೆ ಈ ಸಾಲಿನಲ್ಲಿ ಇವತ್ತಿನವರೆಗೆ 10.87 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿಗೆ ಕಳೆದ ಸಾಲಿನಲ್ಲಿ 15.43 ಇಂಚು ಮಳೆಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 5.95 ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ 11.26 ಇಂದು ಮಳೆಯಾಗಿದ್ದರೆ, ಈ ಸಾಲಿನಲ್ಲಿ 5.75 ಇಂಚು ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 15.31 ಇಂಚು ಮಳೆಯಾಗಿದ್ದರೆ, ಈ ಬಾರಿ ಕೇವಲ 7.52 ಇಂಚು ಮಾತ್ರ ಮಳೆಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. -ಚಂದ್ರ ಉಡೋತ್