ಮಡಿಕೇರಿ, ಜೂ. 11: ಹಲವು ವರ್ಷಗಳ ಕಾಲ ಸ್ವಾರ್ಥ ರಹಿತವಾಗಿ ನಡೆದುಕೊಂಡ ರಾಜಕೀಯ ಜೀವಕ್ಕೆ ಪ್ರತಿಫಲ ದೊರೆತಿದೆ. ಪ್ರಸ್ತುತ ದೊರೆತ ಅವಕಾಶ ತಾವು ಕಾಂಗ್ರೆಸ್ ಪಕ್ಷದಲ್ಲಿ ಸಲ್ಲಿಸಿದ ಸೇವೆಗೆ ದೊರೆತ ಮನ್ನಣೆಯಾಗಿದೆ. ಇದನ್ನು ಸದುಪಯೋಗಪಡಿಸಿ ಕೊಂಡು ಕಾಂಗ್ರೆಸ್ ಪಕ್ಷವನ್ನು ಮರು ಸಂಗಟಿಸುವದರೊಂದಿಗೆ ಕೊಡಗಿನ ಸಮಗ್ರ ಅಭಿವೃದ್ಧಿ-ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವದಾಗಿ ನಿನ್ನೆಯಷ್ಟೆ ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಚುನಾಯಿತರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ವೀಣಾ ಅವಕಾಶವನ್ನು ಸದ್ವಿನಿಯೋಗ ಪಡಿಸಿಕೊಂಡು ರಾಜಕೀಯ ರಹಿತವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವದಾಗಿ ನುಡಿದರು. ಅಭಿವೃದ್ಧಿ-ಸಮಸ್ಯೆಗಳ ವಿಚಾರದಲ್ಲಿ ರಾಜಕೀಯದ ಚಿಂತನೆ ಮಾಡುವದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವರ ಅಭಿಪ್ರಾಯ ಕ್ರೋಢೀಕರಿಸಿ ವಿಚಾರದ ಬಗ್ಗೆ ಸರಕಾರ ಸಂಬಂಧಿಸಿದವರ ಗಮನ ಸೆಳೆಯುವದಾಗಿ ಅವರು ಭರವಸೆಯಿತ್ತರು.

ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯರಂತಹ ಚೇತನಗಳು ತಮ್ಮ ಸೇವೆ-ಶಿಸ್ತಿನ ಮೂಲಕ ಕೊಡಗನ್ನು ವಿಶ್ವಮಟ್ಟದಲ್ಲಿ ಗುರುತಿಸಿದ್ದಾರೆ. ಇಂತಹ ಜಿಲ್ಲೆಯಲ್ಲಿ ಯಾವದೇ ಕಪ್ಪು ಚುಕ್ಕೆ ಉಂಟಾಗಬಾರದು ಎಂಬದು ತಮ್ಮ ಧ್ಯೇಯವಾಗಿದೆ. ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷದಿಂದ ಹಿಡಿದು ಹಲವಾರು ಗಂಭೀರ ಸಮಸ್ಯೆಗಳು ನಿರಂತರವಾಗಿ ಮುಂದುವರಿದು ಕೊಂಡು ಬರುತ್ತಿದೆ. ಇಂತಹ ಸಮಸ್ಯೆಗಳ ಕುರಿತು ಆಯಾ ಇಲಾಖೆಯ ಸಚಿವರು-ಅಧಿಕಾರಿಗಳೊಂದಿಗೆ ಸಮರ್ಪಕ ರೀತಿಯಲ್ಲಿ ಚರ್ಚಿಸಿ ಗಮನ ಸೆಳೆಯುತ್ತೇವೆ. ಇದರೊಂದಿಗೆ ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳಿಗೂ ಸೂಕ್ತ ಗೌರವ ನೀಡುತ್ತೇವೆ. ಅಧಿಕಾರಿಗಳು ಕೊಡಗಿನ ಸಮಸ್ಯೆಯನ್ನು ಅರ್ಥೈಸಿಕೊಂಡು ಪ್ರಾಮಾಣಿಕ ರೀತಿಯಲ್ಲಿ ಕಾನೂನು ಬದ್ಧವಾಗಿ ಸ್ವಾರ್ಥ ರಹಿತವಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂಬದು ತಮ್ಮ ಅಭಿಲಾಷೆಯಾಗಿದೆ. ಒಂದು ವೇಳೆ ಕರ್ತವ್ಯಕ್ಕೆ ಚ್ಯುತಿ ಮಾಡಿ ಸಾಮಾನ್ಯ ಜನತೆಗೆ ಸಮಸ್ಯೆ ಸೃಷ್ಟಿಸಿದರೆ ಇದನ್ನು ಸಹಿಸಲಾಗದು ಎಂದು ವೀಣಾ ಅಚ್ಚಯ್ಯ ಎಚ್ಚರಿಸಿದರು.

ಮುಖ್ಯವಾಗಿ ಕಂದಾಯ ಇಲಾಖೆಯಲ್ಲಿ ಜಿಲ್ಲೆಯ ಜನ ಸಾಮಾನ್ಯರನ್ನು ಸತಾಯಿಸಲಾಗುತ್ತಿದೆ ಎಂಬ ದೂರು ಈ ಹಿಂದಿನಿಂದಲೂ ತಮಗೆ ಬರುತ್ತಿದೆ. ಈ ಬಗ್ಗೆ ಹೆಚ್ಚು ಗಮನ ಹರಿಸಲಿರುವದಾಗಿ ಅವರು ಹೇಳಿದರು.

ಕೊಡಗಿನಲ್ಲಿ ಗಂಭೀರತೆಗೆ ಕಾರಣವಾಗುತ್ತಿರುವ ದೇವಟ್ ಪರಂಬು ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಈ ಬಗ್ಗೆ ತಾವು ಹೆಚ್ಚು ಪ್ರತಿಕ್ರಿಯಿಸು ವದಿಲ್ಲ. ಜಿಲ್ಲೆಯಲ್ಲಿ ಎಲ್ಲರೂ ಈ ಹಿಂದಿನಿಂದಲೂ ಅಣ್ಣತಮ್ಮಂದಿರಂತೆ ಅನ್ಯೋನ್ಯತೆಯಿಂದ ಬದುಕಿಕೊಂಡು ಬಂದಿದ್ದಾರೆ. ಯಾರಿಗೂ ಅನ್ಯಾಯ ವಾಗಬಾರದು. ಇದರೊಂದಿಗೆ ವಿಷಯಾನುಸಾರ ಹೊಂದಾಣಿಕೆಯ ಮನೋಭಾವದ ಅಗತ್ಯತೆಯೂ ಎಲ್ಲರ ಹೃದಯದಲ್ಲಿರಬೇಕೆಂದು ವೀಣಾ ಅಭಿಪ್ರಾಯಪಟ್ಟರು.