ಬೆಂಗಳೂರು, ಜು. 14: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷಗಳ ನಾಯಕರು, ಪ್ರಕರಣ ಸಂಬಂಧ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.ಪ್ರತಿಪಕ್ಷಗಳ ತೀವ್ರ ಗದ್ದಲದ ಹಿನ್ನಲೆಯಲ್ಲಿ ಉಭಯ ಸದನಗಳ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದ ನಂತರ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜೆ.ಜಾರ್ಜ್ ಅವರನ್ನು ರಕ್ಷಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಆಹೋರಾತ್ರಿ ಧರಣಿ ಕೈಗೊಂಡರೂ ಕೆ.ಜೆ. ಜಾರ್ಜ್ ರಾಜೀನಾಮೆ ಪಡೆಯುತ್ತಿಲ್ಲ ಎಂದರು. ಅಲ್ಲದೆ ಯಾವದೇ ಚರ್ಚೆಯಿಲ್ಲದೆ ಎಲ್ಲಾ ಇಲಾಖೆಯ ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಿರುವ ಸರ್ಕಾರ, ವಿಧಾನಸಭೆ ಕಲಾಪವನ್ನು ನಾಳೆಯಿಂದ ಅನಿರ್ಧಿಷ್ಠಾವಧಿಗೆ ಮುಂದೂಡುವ ಕುತಂತ್ರ ನಡೆಸಿದೆ ಎಂದು ಆರೋಪಿಸಿದರು.

ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತು ಯಾವ ರೀತಿಯ ಉತ್ತರ ನೀಡಿದ್ದೀರಿ ಎಂದು ರಾಜ್ಯದ ಜನತೆ ನೋಡಿದ್ದಾರೆ. ಗಣಪತಿ ಆತ್ಮಹತ್ಯೆಗೂ ಮುನ್ನ ತಮ್ಮ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ನೀಡಿದ್ದಾರೆ. ಡೈಯಿಂಗ್ ಡಿಕ್ಲೆರೇಶನ್ ಆಧಾರದ ಮೇಲೆ

ಎಫ್‍ಐಆರ್ ದಾಖಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶೆಟ್ಟರ್ ಒತ್ತಾಯಿಸಿದರು,

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನ್ಯಾಯಾಂಗ ತನಿಖೆಯಿಂದ ಸತ್ಯಾಂಶ ಹೊರ ಬರುವದಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಜನರಲ್ಲಿ ವಿಶ್ವಾಸ ಮೂಡಬೇಕಾದರೆ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಪಡೆಯಿರಿ ಎಂದು ಆಗ್ರಹಿಸಿದರು.

ರಾಜಕೀಯ ಉದ್ದೇಶದಿಂದ ಜಾರ್ಜ್ ರಕ್ಷಣೆ ನಿಂತಿರುವ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿರಲು ಅನ್‍ಫಿಟ್. ತಮ್ಮ ಸರಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಎಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದರು.