ಸೋಮವಾರಪೇಟೆ, ಜು. 2: ಎತ್ತ ನೋಡಿದರತ್ತ ಗಿರಿಕಂದರಗಳ ಸಾಲು, ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಹಚ್ಚ ಹಸಿರಿನ ವನರಾಶಿಯ ನಡುವೆ ಮಂಜಿನ ಹನಿಗಳ ಚೆಲ್ಲಾಟ.., ಸುತ್ತಲೂ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಪ್ರದೇಶ.., ಎರಡೂ ಬದಿಯಲ್ಲಿ ಬೃಹತ್ ಬೆಟ್ಟ..,ನಡುವೆ ಹಾಲಿನ ಹೊಳೆಯೇ ಹರಿಯುತ್ತಿದೆಯೇನೋ ಎಂದು ಭಾಸವಾಗುವ ಹಾಲ್ನೊರೆಯಂತಹ ನೀರಿನ ವೈಭವ.., ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಖನಿ ಮಲ್ಲಳ್ಳಿ ಜಲಪಾತ ಮುಂಗಾರು ಮಳೆಗೆ ಮೈದಳೆದಿದೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವದರಿಂದ ಮಲ್ಲಳ್ಳಿ ಜಲಪಾತ ದಿನದಿಂದ ದಿನಕ್ಕೆ ತನ್ನ ಸೌಂದರ್ಯವನ್ನು ದ್ವಿಗುಣಗೊಳಿಸಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ. ಮಳೆಗಾಲ ಪ್ರಾರಂಭದಿಂದ ಹಿಡಿದು ಜನವರಿ ತಿಂಗಳವರೆಗೂ ಹಾಲ್ನೊರೆ ಸೂಸುತ್ತಾ, ಸುಮಾರು 200 ಅಡಿಗೂ ಎತ್ತರದಿಂದ ಭೋರ್ಗರೆಯುತ್ತ ಧುಮ್ಮಿಕ್ಕುವ ಮಲ್ಲಳ್ಳಿ ಜಲಪಾತ ನಿಜಕ್ಕೂ ಪ್ರವಾಸಿಗರ ಸ್ವರ್ಗವಾಗಿದೆ.

ದಿನನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆದು ಹೃನ್ಮನ ತಣಿಸುವ ನ್ಯೆಸರ್ಗಿಕ ಜಲಧಾರೆಯ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಿಗರ ದಂಡು ಲಗ್ಗೆಯಿಡುತ್ತಿದ್ದು, ನೈಸರ್ಗಿಕವಾಗಿ ಸಹಜ ಸೌಂದರ್ಯ ಹೊಂದಿರುವ ಜಲಪಾತ ಇದೀಗ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ನಿಸರ್ಗ ರಮಣೀಯತೆಯನ್ನು ತನ್ನೊಡಲ್ಲಿರಿಸಿಕೊಂಡಿರುವ ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಬೃಹತ್ ಕಲ್ಲು ಬಂಡೆಯಿಂದ 200 ಅಡಿ ಕೆಳಭಾಗಕ್ಕೆ ಭೋರ್ಗರೆಯುತ್ತಾ ಧುಮುಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಮನಮೋಹಕವಾಗಿದ್ದು, ಪ್ರವಾಸಿಗರಿಗೆ ಜೋಗ ಜಲಪಾತದ ಅನುಭವ ನೀಡುತ್ತದೆ. ಜಲಪಾತದ ಕೆಳಭಾಗಕ್ಕೆ ಮೆಟ್ಟಿಲುಗಳ ಮೂಲಕ ತೆರಳಿದರೆ ದಟ್ಟ ಹಿಮದೊಂದಿಗೆ ಎಳೆ ನೀರಿನ ಸಿಂಚನವಾಗುತ್ತದೆ. ನೈಸರ್ಗಿಕ ಸ್ವರ್ಗವೇ ಇಲ್ಲಿ ಸೃಷ್ಟಿಯಾದಂತೆ ಮಲ್ಲಳ್ಳಿ ಜಲಪಾತ ಕಂಗೊಳಿಸುವ ಪರಿ ನಿಜಕ್ಕೂ ವರ್ಣಿಸಲಸಾಧ್ಯ.

ಜಿಲ್ಲೆಯಲ್ಲಿಯೇ ಅತೀ ಎತ್ತರದದಿಂದ ಧುಮ್ಮಿಕ್ಕುವ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲ್ಲಳ್ಳಿ ಜಲಪಾತಕ್ಕೆ ತೆರಳಲು ಸೋಮವಾರಪೇಟೆಯಿಂದ 23 ಕಿ.ಮೀ.ಗಳಾಗುತ್ತವೆ. ಸೋಮವಾರಪೇಟೆ-ಶಾಂತಳ್ಳಿ-ಬೆಟ್ಟದಳ್ಳಿ-ಹಂಚಿನಳ್ಳಿಗೆ ತೆರಳಿದರೆ ಅಲ್ಲಿಂದ 3 ಕಿ.ಮೀ. ಒಳ ರಸ್ತೆಯಲ್ಲಿ ತೆರಳಬೇಕು.

ಇದೀಗ ಜಲಪಾತಕ್ಕೆ ತೆರಳಲು ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಜಲಪಾತದ ಸ್ಥಳಕ್ಕೆ ಬೇಸಿಗೆಯಲ್ಲಿ ವಾಹನಗಳು ತೆರಳುತ್ತವಾದರೂ ಮಳೆಗಾದಲ್ಲಿ ಕಷ್ಟಸಾಧ್ಯ. ಜಲಪಾತದಿಂದ 500 ಮೀಟರ್ ಹಿಂದೆ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡು ಹೋದರೆ ಉತ್ತಮ.

ಇಲ್ಲಿಗೆ ತೆರಳುವ ಪ್ರವಾಸಿಗರು ಯಾವದೇ ಕಾರಣಕ್ಕೂ ನೀರಿಗೆ ಇಳಿಯುವಂತಿಲ್ಲ. ಜಲಪಾತದಲ್ಲಿ ನೀರಿನ ಭೋರ್ಗರೆತ ಹಾಗೂ ಹರಿಯುವಿಕೆ ಬಿರುಸಿನಿಂದ ಕೂಡಿದ್ದು, ಅರೆಕ್ಷಣ ಎಚ್ಚರ ತಪ್ಪಿ ನೀರಿಗಿಳಿದರೆ ಅಪಾಯ. ನೀರುಕುಡಿಯಲು, ನೀರಿನಲ್ಲಿ ಮೋಜಿನಾಟವಾಡಲು ಜಲಪಾತದ ಕೆಳಗೆ ಇಳಿದವರು ಬದುಕಿಬಂದ ಉದಾಹರಣೆ ಕಡಿಮೆ. ನೀರಿಗೆ ಇಳಿಯದಿರಿ. ಪ್ರಕೃತಿ ಸೌಂದರ್ಯದ ಖನಿಯ ನಡುವೆ ಮೈದುಂಬಿ ಧುಮ್ಮುಕ್ಕುತ್ತಿರುವ ಮಲ್ಲಳ್ಳಿ ಜಲಪಾತವನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ.

- ವಿಜಯ್ ಹಾನಗಲ್