ಕುಶಾಲನಗರ, ಜು. 18: ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ರಂಗಸಮುದ್ರದ ನಿವಾಸಕ್ಕೆ ಸಿಐಡಿ ತಂಡ ಸೋಮವಾರ ಭೇಟಿ ನೀಡಿದೆ. ಸಿಐಡಿ ಎಸ್ಪಿ ಕುಮಾರಸ್ವಾಮಿ ನೇತೃತ್ವದ ತಂಡ ಗಣಪತಿ ಅವರ ಪತ್ನಿಯನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭ ಪಾವನ ಗಣಪತಿ ಸಿಐಡಿ ಅಧಿಕಾರಿಗಳಿಗೆ 6 ಪುಟಗಳನ್ನೊಳಗೊಂಡ ದೂರನ್ನು ನೀಡಿರುವದಾಗಿ ತಿಳಿದು ಬಂದಿದೆ. ಈ ಸಂದರ್ಭ ಮಾಧ್ಯಮ ಹಾಗೂ ಪತ್ರಕರ್ತರನ್ನು ಸಿಐಡಿ ತಂಡ ಒಳಬಿಡಲಿಲ್ಲ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪಾವನ ಗಣಪತಿ, ತನ್ನ ಪತಿಯ ಸಾವಿಗೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗದೆ ತಾನು ತನಿಖಾ ತಂಡಕ್ಕೆ ಯಾವದೇ ಸಹಕಾರ ನೀಡುವದಿಲ್ಲ ಎಂದು ತಿಳಿಸಿರುವದಾಗಿ ಮಾಹಿತಿ ನೀಡಿದರು.

ಗಣಪತಿ ಸಾವಿಗೆ ಸಂಬಂಧಿಸಿದಂತೆ ಮಡಿಕೇರಿ ನ್ಯಾಯಾಲಯದಿಂದ ಎಫ್‍ಐಆರ್ ದಾಖಲಿಸಲು ಸೂಚನೆ ಬಂದ ಬಗ್ಗೆ ಪ್ರತಿಕ್ರಿಯಿಸಿದ ಗಣಪತಿ ಕುಟುಂಬ ಸದಸ್ಯರು ಈ ಮೂಲಕ ನಮ್ಮ ಕುಟುಂಬಕ್ಕೆ ನ್ಯಾಯ ದೊರಕುವ ಆಶಾಭಾವನೆ ಬಂದಿದೆ ಎಂದು ತಿಳಿಸಿದ್ದಾರೆ. ಗಣಪತಿ ಅವರ ತಂದೆ ಎಂ.ಕೆ. ಕುಶಾಲಪ್ಪ ಪ್ರತಿಕ್ರಿಯಿಸಿ ನ್ಯಾಯಕ್ಕಾಗಿ ಕಾಯುತ್ತಿದ್ದ ನಮಗೆ ನ್ಯಾಯಾಲಯದ ಮೂಲಕ ಸಮಾಧಾನ ಸಿಕ್ಕಿದೆ ಎಂದ ಅವರು ಪ್ರಕರಣದ ಸತ್ಯಾಸತ್ಯತೆ ಹೊರಗೆಡ ಹುವಲ್ಲಿ ಮಾಧ್ಯಮ ಮತ್ತು ಪತ್ರಕರ್ತರ ಸಹಕಾರದ ಬಗ್ಗೆ ಕೃತಜ್ಞತೆ ಸಲ್ಲಿಸಿದರು.