ಮಡಿಕೇರಿ, ಜೂ. 8: ಇನ್ನು ಎರಡು - ಮೂರು ದಿನಗಳಲ್ಲಿ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಹೇಳಿದೆಯಾದರೂ ಇದೀಗ ವಾತಾವರಣ ಬದಲಾಗಿದ್ದು, ಮಳೆಗಾಲ ಆರಂಭದ ಮುನ್ಸೂಚನೆ ಗೋಚರಿಸಿದೆ. ನಿನ್ನೆ ಮಧ್ಯಾಹ್ನದಿಂದ ಮಳೆ ಸುರಿಯಲಾರಂಭಿಸಿದ್ದು, ಇಂದು ಮಧ್ಯಾಹ್ನದ ಬಳಿಕ ನಿರಂತರ ಮಳೆಯಾಗಿದೆ. ಜಿಲ್ಲೆಯಾದ್ಯಂತ ಮಳೆ ಗಾಲದ ವಾತಾವರಣ ಸೃಷ್ಟಿಯಾಗಿದೆ.

ಸೋಮವಾರಪೇಟೆ : ಕಳೆದ ಕೆಲ ದಿನಗಳಿಂದ ಮೋಡ ಕವಿದರೂ ಮಳೆ ಬಾರದ ಹವಾಮಾನವಿದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಇಂದು ಸುರಿದ ಭಾರೀ ಮಳೆ, ಮಳೆಗಾಲ ಆರಂಭದ ಮುನ್ಸೂಚನೆ ನೀಡಿತು.

ಸಂಜೆ ವೇಳೆಗೆ ಸುರಿದ ಮಳೆ ರಾತ್ರಿಯವರೆಗೂ ಮುಂದುವರೆಯಿತು. ಬೆಳಗ್ಗಿನಿಂದಲೂ ಬಿಸಿಲು ಇದ್ದ ವಾತಾವರಣದಲ್ಲಿ ಮಧ್ಯಾಹ್ನದ ನಂತರ ಭಾರೀ ವರ್ಷಾಧಾರೆ ಧರೆಗಿಳಿಯಿತು. ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ಮಂದಿ ಸಂಜೆ ಮನೆಗೆ ಹಿಂತೆರಳಲು ಮಳೆ ಅಡ್ಡಿಯಾಯಿತು. ತಾಲೂಕಿನ ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ, ಐಗೂರು, ಅಬ್ಬೂರುಕಟ್ಟೆ, ಗಣಗೂರು ವ್ಯಾಪ್ತಿಯಲ್ಲೂ ಮಳೆ ಸುರಿಯಿತು.