ಶನಿವಾರಸಂತೆ, ಜೂ. 8: ಜಿಲ್ಲೆಯಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯ ಚಟುವಟಿಕೆಗಳ ಬೆಳವಣಿಗೆ ದೃಷ್ಟಿಯಿಂದ ಗ್ರಾಮಾಂತರ ಪ್ರದೇಶದಲ್ಲಿ ಹೋಬಳಿ ಮಟ್ಟದ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು.

ಸ್ಥಳೀಯ ಮಹಿಳಾ ಸಹಕಾರ ಸಮಾಜದಲ್ಲಿ ನಡೆದ ಕಸಾಪ ಶನಿವಾರಸಂತೆ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಾಹಿತ್ಯದ ಬೆಳವಣಿಗೆಗಾಗಿ ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 1ಗ್ರಾಂ ಚಿನ್ನದ ನಾಣ್ಯ ಬಹುಮಾನವಾಗಿ ಕೊಡುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಸಮಾರಂಭ ಉದ್ಘಾಟಿಸಿದ ತಾಲೂಕು ಅಧ್ಯಕ್ಷ ಎಚ್.ಜೆ. ಜವರಪ್ಪ ಮಾತನಾಡಿ, ಪರಿಷತ್ತಿನ ಜೊತೆ ಜನಸಾಮಾನ್ಯರೂ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನವಿರಿಸಿ ಶ್ರಮಿಸಿದಾಗ ಕನ್ನಡ ಭಾಷೆ ಹಾಗೂ ಸಾಹಿತ್ಯ ಅಭಿವೃದ್ಧಿ ಹೊಂದುತ್ತದೆ ಎಂದರು.

ಕಾವೇರಿ ಕಾಲೇಜಿನ ಉಪನ್ಯಾಸಕ ಕಿರಣ್ ಕುಮಾರ್, ದೇಜಗೌ ಅವರ ಬದುಕು-ಬರಹ ಕುರಿತು ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಜೀವನಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರಾಜಶೇಖರ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ, ಮಾಧ್ಯಮ ಕಾರ್ಯದರ್ಶಿ ಅಶ್ವಥ್ ಕುಮಾರ್, ಘಟಕದ ಪದಾಧಿಕಾರಿಗಳಾದ ಡಿ.ಬಿ. ಸೋಮಪ್ಪ, ಜಯಕುಮಾರ್, ಬಿ.ಬಿ. ನಾಗರಾಜ್, ಎಚ್.ಬಿ. ಜಯಮ್ಮ, ರುಕ್ಮಿಣಿ, ಭುವನೇಶ್ವರಿ, ಪುಷ್ಪಾ, ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.