ಮಡಿಕೇರಿ, ಜು. 2: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕರ ಲ್ಲೊಬ್ಬರಾಗಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾಗಿರುವ ಗೋಣಿಕೊಪ್ಪಲುವಿನ ಬಿ.ಎನ್. ಪ್ರಕಾಶ್ ಅವರು ನೇಮಕಗೊಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಕಾಶ್ 13 ನಿರ್ದೇಶಕರನ್ನು ಒಳಗೊಂಡ ಆಡಳಿತ ಮಂಡಳಿಯಲ್ಲಿ ಓರ್ವರಾಗಿ ಸರಕಾರದಿಂದ ನಿಯುಕ್ತಿಗೊಂಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಸರಕಾರದ ಜಂಟಿ ಕಾರ್ಯದರ್ಶಿ ಹೆಚ್.ಕೆ. ರವಿಮೂರ್ತಿ ಅವರು ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ‘ಶಕ್ತಿ'ಯೊಂದಿಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ಅವರು ಪಕ್ಷದ ಶಿಫಾರಸಿನ ಮೂಲಕ ತಮಗೆ ಈ ಅವಕಾಶ ದೊರೆತಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಪರಿಸರಕ್ಕೆ ಪೂರಕವಾದ ಯೋಜನೆಗಳನ್ನು ನಿಗಮದ ಮೂಲಕ ಜಿಲ್ಲೆಗೆ ತರಲು ಪ್ರವಾಸೋದ್ಯಮ ಇಲಾಖೆಯೊಂದಿಗೆ ಪ್ರಯತ್ನಿಸಲಾಗುವದು ಎಂದು ಹೇಳಿದರು. ನಿಗಮದ ಅಧ್ಯಕ್ಷರು, ಪ್ರವಾಸೋದ್ಯಮ ಸಚಿವರಾದ ಪ್ರಿಯಾಂಕ ಖರ್ಗೆ ಅವರುಗಳ ಮೂಲಕ ಪ್ರವಾಸೋದ್ಯಮದ ಬೆಳವಣಿಗೆ, ಸಮಸ್ಯೆ, ಪರಿಹಾರದ ಬಗ್ಗೆ ಚರ್ಚಿಸಿ ಯೋಜನೆ ಜಾರಿಗೆ ತರಲು ಪ್ರಯತ್ನಿಸುವದಾಗಿ ಹೇಳಿದ ಅವರು, ಮಡಿಕೇರಿಯ ವ್ಯಾಲಿವ್ಯೂ, ಭಾಗಮಂಡಲದ ಮಯೂರ ವಸತಿ ಗೃಹಗಳು ನಿಗಮದ ಅಧೀನಕ್ಕೆ ಬರಲಿದ್ದು, ಇವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕಾರ್ಯಯೋಜನೆ ರೂಪಿಸುವದರೊಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವದಾಗಿ ತಿಳಿಸಿದರು.