ಕುಶಾಲನಗರ, ಜೂ. 12 : ‘ಜೀವನದಿ ಕಾವೇರಿ’ ತಟದ ಒತ್ತುವರಿ ತೆರವು ಮಾಡುವ ಮೂಲಕ ನದಿ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮನವಿ ಮಾಡಿದ್ದಾರೆ.

ಮಡಿಕೇರಿ ವಿಭಾಗದ ಅರಣ್ಯ ಇಲಾಖೆ ಆಶ್ರಯದಲ್ಲಿ ಕುಶಾಲನಗರ ಕಾವೇರಿ ಪರಿಸರ ರಕ್ಷಣಾ ಬಳಗ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗ ದೊಂದಿಗೆ ಕುಶಾಲನಗರದ ಎಪಿಎಂಸಿ ಆವರಣದಲ್ಲಿ ಪರಿಸರ ಜಾಗೃತಿ ಅಂಗವಾಗಿ ಏರ್ಪಡಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನದಿ ಭಾಗದಿಂದ 30ಮೀ ಅಂತರದಲ್ಲಿ ಗಿಡ ಮರಗಳನ್ನು ಬೆಳೆಸುವ ಮೂಲಕ ನದಿ ಕಲುಷಿಕೆಯನ್ನು ತಪ್ಪಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕಾಗಿದೆ. ಅರಣ್ಯ ಇಲಾಖೆ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಮಾತನಾಡಿ, ಹಸಿರು ಕುಶಾಲನಗರ-ಸ್ವಚ್ಛ ಕುಶಾಲನಗರ ರೂಪಿಸುವದು ತನ್ನ ಗುರಿಯಾಗಿದ್ದು, ಪಟ್ಟಣದಲ್ಲಿ ಹೊಸದಾಗಿ ಮನೆ ನಿರ್ಮಿಸುವ ಸಂದರ್ಭ ಕನಿಷ್ಟ ಒಂದು ಗಿಡ ನೆಡುವದನ್ನು ಕಡ್ಡಾಯ ಮಾಡಲಾಗುವದು ಎಂದು ಹೇಳಿದರು.

ಎಪಿಎಂಸಿ ಆಡಳಿತಾಧಿಕಾರಿ ಆಗಿರುವ ತಹಶೀಲ್ದಾರ್ ಬಿ. ಶಿವಪ್ಪ ಮಾತನಾಡಿ, ಕಾಂಕ್ರಿಟ್ ಕಾಡಿನ ಜೊತೆಗೆ ನೈಸರ್ಗಿಕ ಕಾಡು ಕೂಡ ಸಮತೋಲನ ಸಾಧಿಸಬೇಕಾಗಿದೆ. ಈ ದಿಸೆಯಲ್ಲಿ 1 ಮರ ಕಡಿದರೆ 10 ಗಿಡಗಳನ್ನು ಕಡ್ಡಾಯವಾಗಿ ನೆಡುವ ಕಾರ್ಯವಾಗಬೇಕಾಗಿದೆ ಎಂದರು.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಕುಡಾ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿದರು. ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ಎಂ.ಬಿ. ಜಯಂತ್, ಸೋಮವಾರಪೇಟೆ ಪ.ಪಂ. ಸದಸ್ಯ ಉದಯ ವೇದಿಕೆಯಲ್ಲಿದ್ದರು. ಕಾವೇರಿ ಪರಿಸರ ರಕ್ಷಣಾ ಬಳಗದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಸ್ವಾಗತಿಸಿ, ಬರಮಣ್ಣ ಪ್ರಾರ್ಥಿಸಿದರು. ಕೆ.ಎಸ್ ಮೂರ್ತಿ ಕಾರ್ಯಕ್ರಮ ನಿರೂಪಿಸಿ, ಟಿ.ಜಿ ಪ್ರೇಮ್ ಕುಮಾರ್ ವಂದಿಸಿದರು.

ಆರ್.ಎಂ.ಸಿ ಆವರಣದಲ್ಲಿ ಒಟ್ಟು 800 ಕ್ಕೂ ಅಧಿಕ ಗಿಡಗಳನ್ನು ಈ ಸಂದರ್ಭ ನೆಡಲಾಯಿತು. ಕುಶಾಲನಗರ ಅರಣ್ಯ ವಲಯದ ಉಪ ಅರಣ್ಯ ಅಧಿಕಾರಿ ಬಾನಂಡ ದೇವಿಪ್ರಸಾದ್, ಸಿಬ್ಬಂದಿಗಳು, ನಗರದ ವಿವಿಧ ಸಂWದ - ಸಂಸ್ಥೆಗಳ ಪ್ರಮುಖರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಸದಸ್ಯರು, ಸಿಬ್ಬಂದಿ ವರ್ಗ, ಕಾವೇರಿ ಪರಿಸರ ರಕ್ಷಣಾ ಬಳಗದ ಸದಸ್ಯರು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.