ಮಡಿಕೇರಿ, ಜೂ. 8: ಮಡಿಕೇರಿ ನಗರಸಭೆ ವತಿಯಿಂದ ಇಂದು ಮಡಿಕೇರಿ ನಗರದ ಹಲವಾರು ಬೇಕರಿ ಬಾರ್ ಹಾಗೂ ಹೊಟೇಲ್‍ಗಳ ಸ್ವಚ್ಛತೆ ಪರಿಶೀಲನೆ ನಡೆಯಿತು.

ನಗರಸಭಾಧ್ಯಕ್ಷೆ ಶ್ರೀಮತಿ ಬಂಗೇರ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್, ಆಯುಕ್ತೆ ಪುಷ್ಪಾವತಿ ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡ ಇಂದು ದಿಢೀರನೆ ಹಾಲಿನ ಡೈರಿ ಬಳಿಯಿಂದ ಪೇಟೆ ಶ್ರೀರಾಮಮಂದಿರ ದೇವಾಲಯದವರೆಗೆ ಇರುವಂತಹ ಬೇಕರಿ, ವೈನ್‍ಶಾಪ್ ಹಾಗೂ ಹೊಟೇಲ್‍ಗಳ ಪೈಕಿ ಆಯ್ದ ಸುಮಾರು ಹತ್ತು ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿತು. ಇದರೊಂದಿಗೆ ಸಾರ್ವಜನಿಕರು ದೂರು ನೀಡಿದ್ದ ಮಳಿಗೆಗಳಿಗೂ ಭೇಟಿ ನೀಡಿ ಅಲ್ಲಿನ ಆಹಾರ ವ್ಯವಸ್ಥೆ, ಸ್ವಚ್ಛತೆ, ಮಳಿಗೆಯ ದಾಖಲಾತಿ ನವೀಕರಣಗೊಂಡಿದೆಯೆ ಇಲ್ಲವೆ ಎಂಬ ಬಗ್ಗೆ ನಗರಸಭೆ ತಂಡ ಪರಿಶೀಲನೆ ನಡೆಸಿತು. ಶುಚಿತ್ವವನ್ನು ಕಾಪಾಡಿಕೊಳ್ಳದ ಎರಡು ಬೇಕರಿ ಹಾಗೂ ಎರಡು ವೈನ್‍ಶಾಪ್‍ಗಳಿಗೆ ನೋಟೀಸ್ ಜಾರಿ ಮಾಡಲಾಯಿತು. ಇದರೊಂದಿಗೆ ಟ್ರೇಡ್ ಲೈಸನ್ಸ್ ನವೀಕರಣ ಮಾಡದ ಅಂಗಡಿಯೊಂದಕ್ಕೂ ನೋಟೀಸ್ ನೀಡಲಾಯಿತು. ವಾರದೊಳಗಾಗಿ ನೋಟೀಸ್‍ಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಯಿತು.

ಬೀದಿಯಲ್ಲೇ ಬೈದಾಟ

ನಗರಸಭೆ ವತಿಯಿಂದ ಇಂದು ಪರಿಶೀಲನೆ ವೇಳೆ ನಗರಸಭಾಧ್ಯಕ್ಷರು ಕೊಂಚ ತಡವಾಗಿ ಬಂದು ತಂಡದೊಂದಿಗೆ ಸೇರಿಕೊಂಡರು. ಇವರು ಬರುವದಕ್ಕೂ ಮುನ್ನ ಹಾಲಿನ ಡೈರಿ ಬಳಿ ಬಂದ ಕಾಂಗ್ರೆಸ್‍ನ ಹಿರಿಯ ಸದಸ್ಯ ಚುಮ್ಮಿದೇವಯ್ಯ ಅವರು, ಅಧ್ಯಕ್ಷರನ್ನೇಕೆ ಪರಿಶೀಲನೆಗೆ ಕರೆಸಿಲ್ಲ ಎಂದು ಉಪಾಧ್ಯಕ್ಷೆ ಲೀಲಾಶೇಷಮ್ಮ ಅವರ ಬಳಿ ಪ್ರಶ್ನಿಸಿದರು. ಈ ಸಂದರ್ಭ ಲೀಲಾ ಶೇಷಮ್ಮ ಹಾಗೂ ಚುಮ್ಮಿದೇವಯ್ಯ ಅವರ ನಡುವೆ ವಾಗ್ವಾದ ನಡೆದು ಬೀದಿಯಲ್ಲೇ ಪರಸ್ಪರ ಬೈದಾಡಿಕೊಂಡರು. ಆಯುಕ್ತರು, ಸ್ಥಾಯಿ ಸಮಿತಿ ಅಧ್ಯಕ್ಷರ ಬಗ್ಗೆಯೂ ಚುಮ್ಮಿ ದೇವಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.