ಸೋಮವಾರಪೇಟೆ, ಜು. 19: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿನ ಹಣ ಸೇರಿದಂತೆ ಬೆಲೆ ಬಾಳುವ ವಸ್ತುಗಳ ಭದ್ರತೆ ಬಗ್ಗೆ ದೇವಾಲಯ ಆಡಳಿತ ಮಂಡಳಿ ಹೆಚ್ಚಿನ ನಿಗಾವಹಿಸಬೇಕೆಂದು ಇಲ್ಲಿನ ಪೊಲೀಸ್ ಠಾಣಾಧಿಕಾರಿ ಎಂ. ಮಹೇಶ್ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಕಳ್ಳತನಗಳು ಹೆಚ್ಚಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇವಸ್ಥಾನಗಳಲ್ಲಿರುವ ಹುಂಡಿಯಲ್ಲಿನ ಹಣ, ದೇವರ ಬೆಲೆ ಬಾಳುವ ಮೂರ್ತಿಗಳ ಸಂರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ದೇವಾಲಯದ ಕಿಟಕಿ, ಬಾಗಿಲುಗಳ ಭದ್ರತೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಸೂಚಿಸಿದ್ದಾರೆ.

ದೇವಾಲಯಕ್ಕೆ ಸಂಬಂಧಿಸಿದ ಚಿನ್ನಾಭರಣ ಹಾಗೂ ಹೆಚ್ಚಿನ ಬೆಲೆ ಬಾಳುವ ದೇವರ ಮುಖವಾಡ, ಕಿರೀಟಗಳಿದ್ದರೆ ಅದನ್ನು ಬ್ಯಾಂಕ್‍ನ ಲಾಕರ್‍ಗಳಲ್ಲಿ ಅಥವಾ ಅರ್ಚಕರ ಮನೆಯಲ್ಲಿ ಅಥವಾ ದೇವಾಲಯ ಆಡಳಿತ ಮಂಡಳಿಯ ಪ್ರಮುಖರ ಮನೆಗಳಲ್ಲಿಡುವ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಕಳ್ಳತನಗಳಿಗೆ ಕಡಿವಾಣ ಹಾಕಲು ಸಹಕರಿಸಬೇಕಾಗಿ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.