ಕುಶಾಲನಗರ, ಜೂ. 8: ದೇವಟ್ ಪರಂಬು ಪ್ರಕರಣದ ಹೆಸರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಏರ್ಪಟ್ಟಿದ್ದರೂ ಕೂಡ ಜಿಲ್ಲೆಯ ಇಬ್ಬರು ಶಾಸಕರು ಯಾವದೇ ರೀತಿಯ ಕ್ರಮ ಕೈಗೊಳ್ಳದೆ ಮೌನ ತಳೆದಿರುವ ಬಗ್ಗೆ ಸೋಮವಾರಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಟ್ ಪರಂಬು ಸ್ಮಾರಕದ ಹೆಸರಿನಲ್ಲಿ ಕಳೆದ 15 ದಿನಗಳಿಂದ ಕೊಡವ, ಗೌಡ ಸಮುದಾಯದ ನಡುವೆ ದಿನನಿತ್ಯ ಹೇಳಿಕೆಗಳು ಬರುತ್ತಿದ್ದರೂ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಮೌನವಹಿಸಿರುವದು ಶಂಕೆಗೆ ಎಡೆಮಾಡಿದೆ ಎಂದಿದ್ದಾರೆ.

ಶಾಸಕದ್ವಯರು ಈ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಟಿಪ್ಪು ಜಯಂತಿ ಹೆಸರಿನಲ್ಲಿ ಜಿಲ್ಲೆ ನಲುಗಿ ಹೋಗಿದ್ದು ಇದೀಗ ಮತ್ತೆ ಅದೇ ಸ್ಥಿತಿ ಮುಂದುವರೆಯುವ ಸಾಧ್ಯತೆ ಅಧಿಕವಾಗಿದೆ ಎಂದಿರುವ ಅವರು, ತಕ್ಷಣ ಶಾಸಕರುಗಳು ಸೇರಿ ಸಂಬಂಧಿಸಿದ ಸಮುದಾಯಗಳ ಪ್ರಮುಖರ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೆ ಮನವಿ ಮಾಡಿದ್ದು, ಸಭೆ ಕರೆದಲ್ಲಿ ಪಾಲ್ಗೊಂಡು ಈ ಬಗ್ಗೆ ಶಾಂತಿ ಕಲ್ಪಿಸುವಲ್ಲಿ ಎಲ್ಲರ ಸಹಕಾರ ದೊರೆಯಲಿದೆ ಎಂದಿದ್ದಾರೆ.

ಈ ವಿಷಯದಲ್ಲಿ ಮೌನ ತಳೆದಿರುವದು ಸರಿಯಲ್ಲ. ಜಿಲ್ಲಾಡಳಿತ ಕೂಡ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಂಭಾವ್ಯ ಘರ್ಷಣೆಯನ್ನು ತಪ್ಪಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.

ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಗುಂಡೂರಾವ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎಂ. ಕಾಂತರಾಜು ಇದ್ದರು.