ಮಡಿಕೇರಿ, ಜೂ. 8: ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ವತಿಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಗ್ರಾಮದ ಕಾವೇರಿ ನದಿಯ ದಡದಲ್ಲಿ ಸಸಿಗಳನ್ನು ನೆಡುವದರೊಂದಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಸಿ ನೆಡುವ ಸಾಪ್ತಹಕ್ಕೆ ಚಾಲನೆ ನೀಡಿದರು.

ಅರಣ್ಯ ಬೆಳೆಸುವ ಸಂದರ್ಭದಲ್ಲಿ ಹಲಸು, ಬಿದಿರು ಮತ್ತಿತರ ಗಿಡಗಳನ್ನು ಹೆಚ್ಚಾಗಿ ನೆಡಬೇಕಿದೆ ಎಂದು ಶಾಸಕರು ಸಲಹೆ ಮಾಡಿದರು. ಕೊಡಗು ಜಿಲ್ಲೆಯಲ್ಲಿ ಉತ್ತಮ ಪರಿಸರ ಕಾಣಬಹುದಾಗಿದೆ. ಸಮೃದ್ಧ ಅರಣ್ಯವಿದೆ. ಕಾಫಿ ತೋಟಗಳಲ್ಲಿ ಮರಗಿಡಗಳನ್ನು ಬೆಳೆಸಲಾಗಿದೆ.

ಮರ-ಗಿಡಗಳನ್ನು ಇನ್ನಷ್ಟು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಕಾಡನ್ನು ಉಳಿಸುವದರ ಜೊತೆಗೆ ಸಾರ್ವಜನಿಕರ ಬದುಕು ಮತ್ತು ಅಭಿವೃದ್ಧಿಯನ್ನು ಸಹ ಪರಿಗಣಿಸಬೇಕಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾದ್ಯಂತ 11,650 ಗಿಡಗಳನ್ನು ನೆಡುವ ಮೂಲಕ ವಿಶಿಷ್ಟವಾಗಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದರು.

ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕೊಡಗು ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರು, ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಗ್ರಾ.ಪಂ. ಸದಸ್ಯರುಗಳು ಮತ್ತಿತರರು ಪಾಲ್ಗೊಂಡಿದ್ದರು.

ಸಸಿ ನೆಡುವ ಅಭಿಯಾನದ ಅಂಗವಾಗಿ ಮಡಿಕೇರಿ ತಾಲೂಕಿನ ವ್ಯಾಪ್ತಿಯಲ್ಲಿ 3,150 ಗಿಡಗಳು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 3,100 ಗಿಡಗಳು ಮತ್ತು ವೀರಾಜಪೇಟೆ ತಾಲೂಕಿನಲ್ಲಿ 5,100 ಹೀಗೆ ಜಿಲ್ಲಾದ್ಯಂತ ಒಟ್ಟು 11,650 ಗಿಡಗಳನ್ನು ಒಂದೇ ದಿನ ನೆಡಲಾಯಿತು. ಈ ನಿಟ್ಟಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಪ್ರಾದೇಶಿಕ ಅರಣ್ಯ ಇಲಾಖೆ, ಮಡಿಕೇರಿ ಹಾಗೂ ವೀರಾಜಪೇಟೆ ವಿಭಾಗಗಳು ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆಗಳು ಸಸಿಗಳನ್ನು ಪೂರೈಸಿದ್ದವು ಎಂದು ಅವರು ವಿವರಿಸಿದ್ದಾರೆ.

ಸಸಿ ನೆಡುವ ಅಭಿಯಾನದ ಸಪ್ತಾಹವನ್ನು ತಾ. 5 ರಿಂದ 11 ರವರೆಗೆ ಹಮ್ಮಿಕೊಳ್ಳಲಾಗಿದ್ದು. ನೆಲ, ಜಲ ಸಂರಕ್ಷಣೆಯ ಉದ್ದೇಶದಿಂದ ಜಿಲ್ಲೆಯ ಪ್ರಮುಖ ನದಿಗಳಾದ ಕಾವೇರಿ ಹಾಗೂ ಲಕ್ಷ್ಮಣತೀರ್ಥ ಮತ್ತಿತರ ಪ್ರಮುಖ ನದಿಗಳ ದಂಡೆಗಳಲ್ಲಿ ಮತ್ತು ತೊರೆಗಳ, ಕಾಲುವೆಗಳ ದಂಡೆಯಲ್ಲಿ ಸಾಲುತೋಪು ಸಸಿಗಳನ್ನು ನೆಡುವದು ಹಾಗೂ ಶಾಲಾ-ಕಾಲೇಜು, ಅಂಗನವಾಡಿ ಮತ್ತು ಸರ್ಕಾರಿ ಕಟ್ಟಡಗಳ ಸುತ್ತಮುತ್ತ ಸಸಿಗಳನ್ನು ನೆಡುವದು ಮತ್ತು ಅರಣ್ಯ ಬುಡಕಟ್ಟು ಹಕ್ಕುಪತ್ರ ಹೊಂದಿರುವ ಜಾಗಗಳಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜಮೀನುಗಳಲ್ಲಿ ಸಸಿಗಳನ್ನು ನೆಡಲು ಉದ್ದೇಶಿಸಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲು ಸಾರ್ವಜನಿಕರನ್ನು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಏಡುಕೊಂಡಲು ಅವರು ಕೋರಿದ್ದಾರೆ.