ಶನಿವಾರಸಂತೆ, ಮೇ 27: ಜಾತ್ರಾ ಮಹೋತ್ಸವಗಳು ಗ್ರಾಮೀಣ ಸಂಸ್ಕøತಿಯ ಪ್ರತೀಕವಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು.

ಸಮೀಪದ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕಭಂಡಾರ ಗ್ರಾಮದಲ್ಲಿ 18 ಹಳ್ಳಿಗಳ ಗ್ರಾಮಸ್ಥರು ಸೇರಿ ನಡೆಸುವ ದಂಡಿನ ಮಾರಿಯಮ್ಮ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಜನತೆ ಕಲ್ಲು, ಮಣ್ಣು, ನೀರಿನಲ್ಲೂ ದೇವರನ್ನು ಕಾಣುವ ಮನೋಭಾವದವರಾಗಿದ್ದಾರೆ ಎಂದು ಹೇಳಿದ ಅವರು, ಚಿಕ್ಕಭಂಡಾರ ಗ್ರಾಮದಲ್ಲಿ ತಮ್ಮ ಗ್ರಾಮ ವಾಸ್ತವ್ಯದ ಬಳಿಕ ಗ್ರಾಮಕ್ಕೆ ರೂ. 5 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಿಕೊಟ್ಟಿದ್ದು, ಮುಂದಿನ ವರ್ಷ ಸೇತುವೆ ನಿರ್ಮಾಣದೊಂದಿಗೆ ದಂಡಿನ ಮಾರಿಯಮ್ಮ ದೇವಸ್ಥಾನ ಅಭಿವೃದ್ಧಿ ಪಡಿಸಿಕೊಡುವ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ದೇವರು, ತಂದೆ- ತಾಯಿ, ಗುರುಹಿರಿಯರಿಗೆ ಭಕ್ತಿಯಿಂದ ನಮಸ್ಕರಿಸುವ ಪದ್ಧತಿ ಭಾರತೀಯರಲ್ಲಿ ಮಾತ್ರ ಇದೆ. ಕಷ್ಟ ಬಂದಾಗ ಜನತೆ ಮೊದಲು ಗ್ರಾಮದೇವತೆಯ ಮೊರೆ ಹೋಗುತ್ತಾರೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಪಿ. ಪುಟ್ಟರಾಜು, ತಾ.ಪಂ. ಸದಸ್ಯ ಕುಶಾಲಪ್ಪ, ಪ್ರಸನ್ನ ಮಾತನಾಡಿದರು. ಜಾನಪದ ಕ್ಷೇತ್ರ ತಜ್ಞ ಬೆಸೂರು ಶಾಂತೇಶ್ ಪ್ರಾಸ್ತಾವಿಕ ನುಡಿಯಾಡಿದರು.

ಜಾತ್ರಾ ಸಮಿತಿ ಅಧ್ಯಕ್ಷ ಕೆ.ಟಿ. ಅಪ್ಪಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಕೆ.ಜಿ. ವೀರಪ್ಪ, ಕಾರ್ಯದರ್ಶಿ ನಂಜಪ್ಪ, ಸದಸ್ಯರು, ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಸದಸ್ಯರು, ಸಮಾಜ ಕಲ್ಯಾಣ ಇಲಾಖೆಯ ಸಿ.ಪಿ ಚಂದ್ರಶೇಖರ್, ಪುರುಷೋತ್ತಮ, ಎನ್,ಎಸ್. ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.