ಕುಶಾಲನಗರ, ಜು. 2: ಚಿಕ್ಲಿಹೊಳೆ ಜಲಾಶಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ನಾಲೆಗಳ ಹೂಳೆತ್ತುವಲ್ಲಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವದ ರೊಂದಿಗೆ ಕೃಷಿ ಚಟುವಟಿಕೆಗಳಿಗೆ ಅನಾನುಕೂಲ ಉಂಟಾಗುತ್ತಿದೆ ಎಂದು ನಂಜರಾಯ ಪಟ್ಟಣ ಭಾಗದ ರೈತರು ಆರೋಪಿಸಿದ್ದಾರೆ. ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗಿರುವ 11 ಕಿ.ಮೀ. ಉದ್ದದ ನಾಲೆ ಸಂಪೂರ್ಣವಾಗಿ ಕಾಡುಮಯವಾಗುವದರೊಂದಿಗೆ ಕೆಸರು ತುಂಬಿದ್ದು, ನೀರು ಹರಿಯದೆ ದುಸ್ಥಿತಿಗೆ ತಲಪಿದೆ. ಹಲವು ಬಾರಿ ದುರಸ್ತಿಗೊಳಿಸಿ ಹೂಳೆತ್ತುವಂತೆ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಿರುವ ಹಿನ್ನೆಲೆಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗೆ ನೀರು ದೊರಕುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಟಿ.ಕೆ. ಸುಮೇಶ್ ಮಾತನಾಡಿ, ನಾಲೆಗಳು ಸಂಪೂರ್ಣವಾಗಿ ಕಾಡು ಮಯವಾಗಿದ್ದರೂ ಅಧಿಕಾರಿಗಳು ಇದರತ್ತ ಗಮನ ಹರಿಸುತ್ತಿಲ್ಲ. ನಾಲೆಯ ಕೊನೆಯ ಭಾಗದ ಕಾಂಕ್ರೀಟಿಕರಣ ಕಾಮಗಾರಿ ಆರಂಭಿಸಲಾಗಿದ್ದು, ಮಳೆಯ ಹೆಸರಿನಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ದುರಸ್ತಿ ಹೆಸರಿನಲ್ಲಿ ನಾಲೆಯ ಎರಡೂ ಭಾಗ ಅಳವಡಿಸಿದ್ದ ಕಲ್ಲುಗಳು ಕಿತ್ತು ಮತ್ತಷ್ಟು ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು. ನಾಲೆಯ ಆರಂಭದಲ್ಲಿ ದುರಸ್ತಿಗೊಳಿಸಿ ನೀರು ಹರಿಯಲು ಸುಗಮಗೊಳಿಸುವ ಬದಲಾಗಿ ಕೊನೆಯ ಅರ್ಧ ಕಿ.ಮೀ. ಉದ್ದದ ನಾಲೆಯನ್ನು ಮಾತ್ರ ಕಾಂಕ್ರೀಟಿಕರಣಗೊಳಿಸುತ್ತಿರುವದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಮಳೆ ಆರಂಭವಾಗಿದ್ದು, ಕೂಡಲೇ ನಾಲೆಯ ಕಾಡು ತೆರವುಗೊಳಿಸಿ ಹೂಳೆತ್ತುವ ಮೂಲಕ ರೈತರ ಬೆಳೆಗಳಿಗೆ ನೀರು ಒದಗಿಸುವಂತೆ ನಂಜರಾಯ ಪಟ್ಟಣ ರೈತರಾದ ಕೆ.ಡಿ. ಬೆಳ್ಯಪ್ಪ, ಎನ್.ಎಸ್. ಬಸವಣ್ಣ, ಎಂ.ಪಿ. ಭೋಜಮ್ಮ ಪಾಪಣ್ಣ, ಕೆ.ಜಿ. ನವೀನ್, ಪಾರ್ವತಮ್ಮ ಮತ್ತಿತರರು ಆಗ್ರಹಿಸಿದ್ದಾರೆ.