ಗೋಣಿಕೊಪ್ಪಲು, ಜೂ. 8: ಗೋಣಿಕೊಪ್ಪಲು ರಾಜಕೀಯ ಸಂಘರ್ಷದಲ್ಲಿ ಇತ್ತೀಚೆಗಿನ ವರ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕಾದ ದೊಡ್ಡ ಸೋಲು ಇದೆಂದರೆ ತಪ್ಪಾಗಲಾರದು. ಕೇವಲ 6 ಸ್ಥಾನ ಗೆದ್ದಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಪಾಠ ಕಲಿಸಲು ಹೋಗಿ ತಾವೇ ಸೋಲನುಭವಿಸಬೇಕಾದ ಘಟನೆಗೆ ಗ್ರಾ. ಪಂ. ಚುನಾವಣೆ ಸಾಕ್ಷಿಯಾಯಿತು. ಒಟ್ಟು 21 ಸ್ಥಾನಬಲದಲ್ಲಿ ಕಾಂಗ್ರೆಸ್ 14 ಸ್ಥಾನ ಗೆದ್ದಿದ್ದು, ಬಿಜೆಪಿ ಬೆಂಬಲಿತರು-6 ಹಾಗೂ ಪಕ್ಷೇತರ-1 ಅಭ್ಯರ್ಥಿ ಗೆಲ್ಲುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಸಂತಸಕ್ಕೆ ಕಾರಣವಾಗಿತ್ತು. ಆದರೆ, ನಿರಾಯಾಸವಾಗಿ ಲಭಿಸಿದ್ದ ಗ್ರಾ.ಪಂ.ಉಪಾಧ್ಯಕ್ಷ ಸ್ಥಾನವನ್ನು ಕೈಚೆಲ್ಲಿದ ಕಾಂಗ್ರೆಸ್ ಬಿಜೆಪಿ ಬೆಂಬಲಿತರಿಗೆ ಉಪಾಧ್ಯಕ್ಷ ಸ್ಥಾನವನ್ನು ಬೆಳ್ಳಿಯ ತಟ್ಟೆಯಲ್ಲಿ ಉಡುಗೊರೆಯಾಗಿ ನೀಡುವಂತಹ ಸಂದರ್ಭ ಇಂದು ಸೃಷ್ಠಿಯಾಯಿತಲ್ಲದೆ, ಬಿಜೆಪಿ ಬೆಂಬಲಿಗರು ನಗರಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಬಹುಮತವಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರು ತಮಗಾದ ಅವಮಾನದೊಂದಿಗೆ ಪೆಚ್ಚುಮೋರೆ ಹಾಕಿಕೊಂಡು ಹಿಂತಿರುಗಿದ ಘಟನೆಗೆ ಗೋಣಿಕೊಪ್ಪಲು ಸಾಕ್ಷಿಯಾಯಿತು.

ಚುನಾವಣೆಯಲ್ಲಿ ತಾಂತ್ರಿಕ ತಪ್ಪೆಸಗಿದ ಕಾಂಗ್ರೆಸ್ಸಿಗರು ಮತ್ತೊಮ್ಮೆ ಹೇಗಾದರೂ ಉಪಾಧ್ಯಕ್ಷ ಸ್ಥಾನವನ್ನು ದಕ್ಕಿಸಿಕೊಳ್ಳಲು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಚುನಾವಣಾಧಿಕಾರಿ ಸಮಾಜ ಕಲ್ಯಾಣಾಧಿಕಾರಿ ಮುರುಳಿ ದುರ್ಗಪ್ಪ ತಮ್ಮ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದ ಹಿನ್ನೆಲೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿಯೂ ಕಾಂಗ್ರೆಸ್ ಪ್ರಮುಖರಿಗೆ ಉಪಾಧ್ಯಕ್ಷ ಸ್ಥಾನ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ.

ಇಂದು ಗೋಣಿಕೊಪ್ಪಲು ಗ್ರಾ.ಪಂ. ಸಭಾಂಗಣದಲ್ಲಿ ದ್ವಿತೀಯ ಬಾರಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಗತ್ಯವಿದ್ದಲ್ಲಿ ಚುನಾವಣೆ ನಡೆಸಲು ಅವಕಾಶವಿತ್ತು. ಎಲ್ಲ 21 ಸದಸ್ಯರ ಸಮ್ಮುಖದಲ್ಲಿ ಚುನಾವಣಾಧಿಕಾರಿ ಮುರುಳಿ ದುರ್ಗಪ್ಪ ಅವರು ಗೋಣಿಕೊಪ್ಪಲು ಗ್ರಾ.ಪಂ.ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಎಂ.ಸೆಲ್ವಿ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿಯ ಕಾವ್ಯ ಸಿ.ಎಸ್. ಆಯ್ಕೆಯಾಗಿರುವದಾಗಿ ಘೋಷಣೆಮಾಡಿದಾಗ ವಿರೋಧಿಸುವ ಛಾತಿಯನ್ನು ಕಾಂಗ್ರೆಸ್ಸಿಗರು ತೋರಿಸಲಿಲ್ಲ. ಬದಲಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ರಾಜಕೀಯ ರಹಿತವಾಗಿ ಗೋಣಿಕೊಪ್ಪಲು ಅಭಿವೃದ್ಧಿಗೆ ಒಗ್ಗೂಡಿ ಕೆಲಸ ಮಾಡುವ. ಎರಡು ಕೈ ಸೇರಿದರೆ ಚಪ್ಪಾಳೆ. ಬಿಜೆಪಿ-ಕಾಂಗ್ರೆಸ್ ಎಂಬ ಭಿನ್ನಭೇದ ಮರೆತು ಮುಂದಿನ ಐದು ವರ್ಷ ಎಲ್ಲರೂ ಅಭಿವೃದ್ಧಿ ಮುಖಿಯಾಗಿ ಕಾರ್ಯ ನಿರ್ವಹಿಸುವ ಎಂದು ಹೇಳಿದರು.

ಅದೃಷ್ಟದ ಬೆಂಬಲದೊಂದಿಗೆ ಉಪಾಧ್ಯಕ್ಷೆಯಾದ ಬಿಜೆಪಿ ಬೆಂಬಲಿತ ಸದಸ್ಯೆ ಕಾವ್ಯ ಅವರು ಮಾತನಾಡಿ, ತನಗೆ ರಾಜಕೀಯ ಹೊಸತು. ಗೆಲುವು ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಕನಸನ್ನೂ ತಾನು ಕಂಡಿರಲಿಲ್ಲ. ಗೋಣಿಕೊಪ್ಪಲಿನಲ್ಲಿ ಹಲವು ಸಮಸ್ಯೆಗಳಿವೆ. ಎಲ್ಲರೂ ನಗರಾಭಿವೃದ್ಧಿಗೆ ಸ್ಪಂದಿಸಿ ಕೆಲಸ ಮಾಡುವ ಎಂದು ಅಭಿಪ್ರಾಯಪಟ್ಟರು.

ಕೈ ತಪ್ಪಿದ್ದು ಹೇಗೆ?

ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಗೋಣಿಕೊಪ್ಪಲು ನಗರಾಧ್ಯಕ್ಷ ಅಜಿತ್ ಅಯ್ಯಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾ.ಪಂ.ಸದಸ್ಯ ಬಿ.ಎನ್. ಪ್ರಕಾಶ್, ಕಾಂಗ್ರೆಸ್ ಪ್ರಮುಖ ಕುಲ್ಲಚಂಡ ಗಣಪತಿ ಮುಂತಾದ ಪ್ರಮುಖರು ಬಹುಮತವಿಲ್ಲದ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಹಾಗೂ ಮೀಸಲಾತಿ ಅನ್ವಯ ಬಿಜೆಪಿ ಬೆಂಬಲಿತ ಎಂ. ಸೆಲ್ವಿಗೆ ತಕ್ಕ ಪಾಠ ಕಲಿಸಲು ಮೇ 31 ರಂದು ನಡೆದ ಗ್ರಾ.¥ Àಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಸಾಮೂಹಿಕ ಗೈರು ಹಾಜರಾಗುವ ಮೂಲಕ ಹಾಸನ ಜಿ. ಪಂ. ಚುನಾವಣೆ ಮಾದರಿ ವಿರೋಧ ಪಕ್ಷಕ್ಕೆ ಮುಜುಗರ ಹಾಗೂ ಭಯ ಉಂಟುಮಾಡಲು ತೀರ್ಮಾನ ಕೈಗೊಂಡಿದ್ದರು.

ಗೋಣಿಕೊಪ್ಪಲು ಗ್ರಾ.ಪಂ.ಒಟ್ಟು ಸ್ಥಾನ ಬಲದಲ್ಲಿ ಕಾಂಗ್ರೆಸ್ ಬೆಂಬಲಿತರು 14 ಸ್ಥಾನವನ್ನು ಗೆದ್ದಿದ್ದು ಬಿಸಿಎಂ ಎ ಅಭ್ಯರ್ಥಿಗೆ ಗ್ರಾ.ಪಂ. ಉಪಾಧ್ಯಕ್ಷೆಯಾಗುವ ಅವಕಾಶವಿದ್ದು ಕಾಂಗ್ರೆಸ್ ಬೆಂಬಲಿತರಲ್ಲಿ ಎಂ.ಮಂಜುಳಾ, ಸುಲೇಖಾ, ಎಂ.ಶಾಹೀನ್ ಅಥವಾ ಯಾಸ್ಮೀನ್ ಎಸ್. ಅವರಿಗೆ ಮುಕ್ತ ಅವಕಾಶವಿತ್ತು. ಗ್ರಾ.ಪಂ.ಅಧ್ಯಕ್ಷ ಸ್ಥಾನ ಮೀಸಲಾತಿ ಅನ್ವಯ ಬಿಜೆಪಿ ಬೆಂಬಲಿತ ಎಂ.ಸೆಲ್ವಿಗೆ ಒಲಿದಿತ್ತು.

ಕಾಂಗ್ರೆಸ್‍ನ 14 ಸದಸ್ಯರು ಸಾಮೂಹಿಕ ಗೈರು ಹಾಜರಾದಲ್ಲಿ ಚುನಾವಣೆ ಮುಂದೂಡಲು ಅವಕಾಶವಿತ್ತು. ತಾ.31 ರ ಚುನಾವಣಾ ಪ್ರಕ್ರಿಯೆ ಸಂದರ್ಭ 6 ಬಿಜೆಪಿ ಬೆಂಬಲಿತರು ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಸುರೇಶ್ ರೈ ಹಾಜರಾಗಿದ್ದರು. ಇದೇ ಸಂದರ್ಭ ಬಿಜೆಪಿ ಬೆಂಬಲಿತ ಎಂ.ಸೆಲ್ವಿ ಹಾಗೂ ಸಿ.ಎಸ್.ಕಾವ್ಯ ಅವರು ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದರು. ಒಟ್ಟು 21 ಸದಸ್ಯ ಬಲದಲ್ಲಿ 11 ಸದಸ್ಯರು ಹಾಜರಿದ್ದಲ್ಲಿ ಚುನಾವಣೆ ನಡೆಸಲು ಸಾಧ್ಯವಿತ್ತು. ಇದೇ ಸಂದರ್ಭ ಕಾಂಗ್ರೆಸ್ ಪಕ್ಷದ 14 ಸದಸ್ಯರು ಸಾಮೂಹಿಕ ಗೈರು ಹಾಜರಾದಲ್ಲಿ ಚುನಾವಣೆ ಮುಂದೂಡಲು ಅವಕಾಶವಿತ್ತು. ಆದರೆ, ಕಾಂಗ್ರೆಸ್ ಬೆಂಬಲಿತ ಕುಲ್ಲಚಂಡ ಗಣಪತಿ ಹಾಗೂ ಯಾಸ್ಮೀನ್ ಹಾಜರಾಗಿ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದರು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಅಂದು 11.30ಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿತ ಯಾಸ್ಮೀನ್ ನಾಮಪತ್ರ ಸಲ್ಲಿಸಿದ್ದರೂ ಉಪಾಧ್ಯಕ್ಷೆ ಆಗುವ ಅವಕಾಶ ಕೈತಪ್ಪುತ್ತಿರಲಿಲ್ಲ. ಆದರೆ, 15 ನಿಮಿಷ ತಡವಾಗಿ 11.45ಕ್ಕೆ ನಾಮಪತ್ರ ಸಲ್ಲಿಸಿದ್ದರು. ಇದೇ ಸಂದರ್ಭ ಬಿಜೆಪಿ ಬೆಂಬಲಿತರು ಸುಮ್ಮನೆ ಕುಳಿತಿರಲಿಲ್ಲ. 11.45 ಕ್ಕೆ ನಾಮಪತ್ರ ಸಲ್ಲಿಕೆಯಾಗಿರುವ ಕುರಿತು ಪುಸ್ತಕದಲ್ಲಿ ದಾಖಲಿಸಲು ಹಾಗೂ ಚುನಾವಣೆ ಪ್ರಕ್ರಿಯೆಯ ಅಷ್ಟೂ ದಾಖಲೆಗಳನ್ನು ಮೊಬೈಲ್ ಫೆÇೀಟೋ ಹಾಗೂ ಜೆರಾಕ್ಸ್ ಮೂಲಕ ಹೊಂದಿಕೊಳ್ಳುವಲ್ಲಿ ಬಿಜೆಪಿಯ ತಾ.ಪಂ.ಉಪಾಧ್ಯಕ್ಷ ನೆಲ್ಲೀರ ಚಲನ್ ಮತ್ತು ಗ್ರಾ.ಪಂ. ಸದಸ್ಯ ಕುಲ್ಲಚಂಡ ಬೋಪಣ್ಣ ಯಶಸ್ವಿಯಾಗಿದ್ದರು.

ಇದೇ ಸಂದರ್ಭ ಚುನಾವಣಾಧಿಕಾರಿ ಮುರುಳಿ ದುರ್ಗಪ್ಪ ಅವರು ಬಿಜೆಪಿ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷ ನಾಮಪತ್ರ ಕ್ರಮಬದ್ಧವಾಗಿರುವದಾಗಿಯೂ, ಕಾಂಗ್ರೆಸ್ ಬೆಂಬಲಿತ ಯಾಸ್ಮೀನ್ ಅವರು 15 ನಿಮಿಷ ತಡವಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಹಿನ್ನೆಲೆ ತಿರಸ್ಕೃತಗೊಂಡಿರುವದಾಗಿಯೂ ಘೋಷಣೆ ಮಾಡಿದ್ದು, ಅಗತ್ಯ ಕೋರಂ ಇಲ್ಲದ ಹಿನ್ನೆಲೆ ಚುನಾವಣೆಯನ್ನು ಜೂ.8 ಕ್ಕೆ ಮುಂದೂಡಿದ್ದರು.

ಇದೇ ಅವಧಿಯಲ್ಲಿ ಉಪಾಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆ ತರಲು ಕಾಂಗ್ರೆಸ್ ಬೆಂಬಲಿತ ಯಾಸ್ಮೀನ್ ಅವರು ರಾಜ್ಯ ಉಚ್ಛ ನ್ಯಾಯಾಲಯ ವಕೀಲ ಬಸವರಾಜು ಮೂಲಕ ಹೈಕೋರ್ಟ್ ಮೊರೆ ಹೋಗಿದ್ದರು. ಚುನಾವಣೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಲು ಚುನಾವಣಾಧಿಕಾರಿ ಮುರುಳಿ ದುರ್ಗಪ್ಪ ಅವರಿಗೂ ಇದೇ ಸಂದರ್ಭ ಕರೆ ಬಂದಿದ್ದು ಹೈಕೋರ್ಟ್ ಎಲೆಕ್ಷನ್ ಬ್ರಾಂಚ್ ಸರ್ಕಾರಿ ವಕೀಲರ ಮೂಲಕ ಮುರುಳಿ ದುರ್ಗಪ್ಪ ಅವರು ತಮ್ಮ ಕಾರ್ಯ ನಿರ್ವಹಣೆಯ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನಂಬಲರ್ಹ ಮೂಲದ ಪ್ರಕಾರ ಚುನಾವಣಾಧಿಕಾರಿಯ ಕರ್ತವ್ಯ ನಿಷ್ಪಕ್ಷಪಾತವಾಗಿದೆ ಎಂದು ನ್ಯಾಯಾಧೀಶರು ಮನಗಂಡು ಯಾಸ್ಮೀನ್ ಪರವಾಗಿ ತಡೆಯಾಜ್ಞೆ ನೀಡಲಿಲ್ಲ ಎನ್ನಲಾಗಿದೆ. ಚುನಾವಣಾ ಪ್ರಕ್ರಿಯೆ ನಡೆದಿದ್ದು, ಚುನಾವಣಾಧಿಕಾರಿಯ ಯಾವದೇ ತಪ್ಪನ್ನು ಪರಿಗಣಿಸಲಾಗುವದಿಲ್ಲ ಎಂದು ನ್ಯಾಯಾಲಯ ಪರಿಗಣಿಸಿದ್ದು ಇಂದಿನ ಚುನಾವಣೆಗೆ ನಡೆಸಲು ಅನುಮತಿ ನೀಡಲಾಗಿತ್ತು.

ಇಂದು ಚುನಾವಣೆಗೂ ಮುನ್ನ ಕಾಂಗ್ರೆಸ್‍ನ 14 ಸದಸ್ಯರು ಚುನಾವಣಾಧಿಕಾರಿ ಮುರುಳಿ ದುರ್ಗಪ್ಪ ಅವರೊಂದಿಗೆ ಸುಮಾರು 1 ಗಂಟೆ ವಾದ-ವಿವಾದ ನಡೆಸಿದರೂ ಚುನಾವಣಾಧಿಕಾರಿ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡ ಹಿನ್ನೆಲೆ ಪ್ರತಿರೋಧ ಒಡ್ಡಲು ಕಾಂಗ್ರೆಸ್ ಬೆಂಬಲಿತರಿಗೆ ಯಾವದೇ ಅವಕಾಶವಿರದೆ ಮನಸ್ಸಿಲ್ಲದಿದ್ದರೂ ಕಾನೂನು ಬಿಕ್ಕಟ್ಟಿನೊಂದಿಗೆ ವಿರೋಧ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಅಸಹಾಯಕ ಪರಿಸ್ಥಿತಿ ಎದುರಾಯಿತು.

ಯಾಸ್ಮೀನ್ ಅಳಲು

ಅನಾಯಾಸವಾಗಿ ಸಿಗಬಹುದಾಗಿದ್ದ ಉಪಾಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಎಸ್.ಯಾಸ್ಮೀನ್ ತಮ್ಮ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ತನಗೂ ಇದೇ ಪ್ರಥಮ ಅನುಭವ. ಚುನಾವಣೆ ಗೆಲುವು ಇದೇ ಪ್ರಥಮವಾಗಿದ್ದು, ಉಪಾಧ್ಯಕ್ಷೆಯಾಗುವ ಕನಸು ಕಂಡಿದ್ದೆ. ಆದರೆ, ಚುನಾವಣಾ ಕಾನೂನು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪ್ರಮುಖರ ತೀರ್ಮಾನದಂತೆ ನಾನು ನಡೆದುಕೊಂಡೆ. ಇದು ನನಗೆ ಹೊಸ ಅನುಭವ. ಎಲ್ಲವನ್ನೂ ಕ್ರೀಡಾ ಮನೋಭಾವದೊಂದಿಗೆ ಸ್ವೀಕರಿಸುವೆ ಎಂದು ಹೇಳಿದರು.

ಗೋಣಿಕೊಪ್ಪಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಶ್ ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕೇವಲ 6 ಸ್ಥಾನಬಲದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಗೆದ್ದುಕೊಂಡ ಬಿಜೆಪಿ ಬೆಂಬಲಿತರು ಹರ್ಷೋದ್ಘಾರದೊಂದಿಗೆ ಬಸ್ ನಿನ್ದಾಣಕ್ಕೆ ಆಗಮಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಕಾಂಗ್ರೆಸ್ ಸದಸ್ಯರು ಹಾಗೂ ಪ್ರಮುಖರು ಬಹುಮತವಿದ್ದಾಗ್ಯೂ ನಿರಾಶೆಯೊಂದಿಗೆ ಹಿಂತಿರುಗಿದ ಘಟನೆ ನಡೆಯಿತು.

ಬಿಜೆಪಿ ಪ್ರಮುಖರಾದ ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ಕೆ.ಬಿ.ಗಿರೀಶ್ ಗಣಪತಿ, ತಾ.ಪಂ.ಸದಸ್ಯ ಜಯಪೂವಯ್ಯ, ಮಾಜಿ ತಾ.ಪಂ.ಅಧ್ಯಕ್ಷ ವಿ.ಎ.ವೆಂಕಟೇಶ್, ಕಿಲನ್‍ಗಣಪತಿ, ಬಿಜೆಪಿ ನಗರಾಧ್ಯಕ್ಷ ಗಾಂಧಿ ದೇವಯ್ಯ ಮುಂತಾದವರು ಶಾಸಕ ಕೆ.ಜಿ.ಬೋಪಯ್ಯ ಅವರ ಅಭಿವೃದ್ಧಿ ಪರ ಚಿಂತನೆ ಹಾಗೂ ಗೋಣಿಕೊಪ್ಪಲು ಅಭಿವೃದ್ಧಿಗೆ ಕೋಟಿಗಟ್ಟಲೆ ಹಣವನ್ನು ವಿನಿಯೋಗಿಸಿದ ಹಿನ್ನೆಲೆ ಕಾವೇರಿ ಮಾತೆಯ ಕೃಪೆಯೊಂದಿಗೆ ಉಪಾಧ್ಯಕ್ಷೆ ಸ್ಥಾನವೂ ಬಿಜೆಪಿ ವಶವಾಗಿದೆ ಎಂದು ಅಭಿಪ್ರಾಯಪಟ್ಟರು.

ವರದಿ:- ಟಿ.ಎಲ್.ಶ್ರೀನಿವಾಸ್