ವೀರಾಜಪೇಟೆ, ಜೂ. 8: ಕೊಡಗಿನ ಸಮಸ್ತ ಕೊಡವರ ಶ್ರೇಯೋಭಿವೃದ್ಧಿಹಾಗೂ ಕೊಡಗು ಜಿಲ್ಲೆಯ ಮೂಲ ಸಮಸ್ಯೆಯ ಪರಿಹಾರಕ್ಕಾಗಿ ರಾಜಕೀಯ ರಹಿತವಾದ ಒಂದು ಕೊಡವ ಸಂಘಟನೆಯನ್ನು ರೂಪುಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹಿರಿಯ ವಕೀಲ ಮಾತಂಡ ರಮೇಶ್ ಹೇಳಿದರು.

ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಅವರು ಕೊಡವರಲ್ಲಿ ಅನೇಕ ಸಂಘಟನೆಗಳಿದ್ದು ಎಲ್ಲಾ ಕೊಡವರು ಸದಸ್ಯರಾಗುವ ಅವಕಾಶವಿಲ್ಲ. ಕೊಡವ ಜಾತಿ ಜನಾಂಗದ ಮೇಲೆ ಯಾವದೇ ಪ್ರಹಾರ ನಡೆದಾಗ ಕೊಡವರ ಸಂಘಟನೆ ಇಲ್ಲದ ಕಾರಣ ಒಂದೊಂದು ನಾಯಕರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಾರೆ. ಇಂತಹ ಹೇಳಿಕೆಗಳು ಜಾತಿ ಜಾತಿಗಳಲ್ಲಿ ಸಂಘರ್ಷಕ್ಕೆ ಎಡೆ ಮಾಡುತ್ತಿದೆ. ಇತರ ಜನಾಂಗದಂತೆ ಕೊಡವರಿಗೂ ಒಂದು ಸಂಘಟನೆ ಇದ್ದರೆ ಕೊಡವರ ಜ್ವಲಂತ ಸಮಸ್ಯೆಗಳು ಬಂದಾಗ ವೇದಿಕೆಯನ್ನು ನಿರ್ಮಿಸಿ, ಮಾತುಕತೆ ನಡೆಸುವದರ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಾಗಿದೆ. ಆದ್ದರಿಂದ ಸಂಘಟನೆಯ ಅವಶ್ಯಕತೆ ಹಾಗೂ ಅನಿವಾರ್ಯತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದರು.

ಕೊಲ್ಲೀರ ಉಮೇಶ್ ಮಾತನಾಡಿ ಕೊಡವ ಸಮಾಜ, ಅಖಿಲ ಕೊಡವ ಸಮಾಜ, ಫೆಡರೇಷನ್ ಆಫ್ ಕೊಡವ ಸಮಾಜಗಳು ಅವರದೇ ಆದ ಪರಿಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಎಲ್ಲಾರಿಗೂ ಸದಸ್ಯತ್ವ ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಸಂಘಟನೆಗಳಲ್ಲಿ ಆಗಿಂದಾಗ್ಗೆ ಜಿಲ್ಲೆಯಲ್ಲಿ ಉದ್ಭವಿಸುವ ಕೊಡವರ ಗಂಭೀರ ಸಮಸ್ಯೆಗಳನ್ನು, ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು ಅವಕಾಶವಿಲ್ಲ. ಜಿಲ್ಲೆಯ ಎಲ್ಲಾ ಸಮಸ್ತ ಕೊಡವರು ಜನಾಂಗದ ಹಿರಿಯರು ಬುದ್ಧಿಜೀವಿಗಳು, ಪರಿಣಿತರು, ಸಮುದಾಯದ ನಾಯಕರುಗಳು, ಜನ ಪ್ರತಿನಿಧಿಗಳು ಸದಸ್ಯರಾಗಿ ಒಗ್ಗೂಡಲು, ಒಮ್ಮತದ ಒಂದು ವೇದಿಕೆಯನ್ನು ನಿರ್ಮಾಣ ಮಾಡಲು ಕೊಡವ ಸಂಘಟನೆ ಅವಶ್ಯಕತೆ ಇದೆ ಎಂದು ಹೇಳಿದರು.

ಕೋಲತಂಡ ಬೋಪಯ್ಯ ಮಾತನಾಡಿ ಕೊಡವರ ಸಂಘಟನೆ ಇದ್ದರೆ ಯಾವದೇ ಸಮಸ್ಯೆಗಳನ್ನು ಪರಸ್ಪರ ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದು. ಇಂತಹ ಕೊಡವರ ಸಂಘಟನೆಯ ವೇದಿಕೆ ಇಂದು ಅವಶ್ಯಕತೆ ಇದೆ ಇದಕ್ಕೆ ಕೊಡಗಿನ ಎಲ್ಲ ಕೊಡವರ ಸಹಕಾರ ಅಗತ್ಯ ಎಂದು ಹೇಳಿದರು. ಗೋಷ್ಠಿಯಲ್ಲಿ ಮೊಳ್ಳೆರ ಸುಬಾಷ್ ಉಪಸ್ಥಿತರಿದ್ದರು.