ಸೋಮವಾರಪೇಟೆ,ಜ.23: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬಿಡುಗಡೆಯಾಗುವ ಅನುದಾನಗಳು ತಾಲೂಕಿನಲ್ಲಿ ಸಮರ್ಪಕವಾಗಿ ದೊರೆಯುತ್ತಿಲ್ಲ, ಸಮಸ್ಯೆಗಳೂ ಪರಿಹಾರ ಕಾಣುತ್ತಿಲ್ಲ ಎಂದು ಆರೋಪಿಸಿ ಜಿಲ್ಲೆಯ ಬಹುಜನ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಕಾಜೂರು, ತಲ್ತರೆ ಶೆಟ್ಟಳ್ಳಿ, ಬೆಟ್ಟದಳ್ಳಿ, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಹೆಚ್.ಎಸ್. ಮುತ್ತಪ್ಪ ದೂರಿದರು.

ಕಾಮಗಾರಿಗಳನ್ನು ನಡೆಸಲು ಮರಳಿನ ಕೊರತೆ ಇದೆ ಎಂದು ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಆಯಾ ಪಂಚಾಯಿತಿಗಳು ಕಾಮಗಾರಿ ನಡೆಸಲು ಅವಶ್ಯಕವಾದ ಮರಳನ್ನು ಸಮೀಪದ ಹೊಳೆಗಳಿಂದ ತೆಗೆದುಕೊಳ್ಳಲು ಜಿಲ್ಲಾಡಳಿತ ಅನುಮತಿ ನೀಡಬೇಕು. ಈಗಾಗಲೇ ಪ್ರಬಲರು ಒತ್ತುವರಿ ಮಾಡಿಕೊಂಡಿರುವ ಜಾಗಗಳನ್ನು ಕಂದಾಯ ಇಲಾಖಾ ವತಿಯಿಂದ ವಶಕ್ಕೆ ಪಡೆದು ನಿವೇಶನ ರಹಿತ ಕೂಲಿ ಕಾರ್ಮಿಕರು ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಅಕ್ರಮ ಸಕ್ರಮ ಸಮಿತಿಯಿಂದ ಇದುವರೆಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ ಅರ್ಜಿಗಳು ಸಮರ್ಪಕವಾಗಿ ವಿಲೇವಾರಿ ಆಗಿಲ್ಲ. ಒತ್ತುವರಿ ಜಮೀನುಗಳನ್ನು ಬಿಡಿಸುವಾಗ ಕನಿಷ್ಟ ಒಂದು ಅಥವಾ ಎರಡು ಎಕರೆ ಜಾಗಗಳನ್ನು ಹೊಂದಿರುವಂತಹ ಪರಿಶಿಷ್ಟ ಜಾತಿ, ಪಂಗಡದ ಹಾಗೂ ಇತರೆ ಹಿಂದುಳಿದ ವರ್ಗಗಳ ಬಡ ಜನರ ಜಾಗವನ್ನು ಅವರಿಗೆ ಬಿಟ್ಟುಕೊಟ್ಟು ಹಕ್ಕು ಪತ್ರಗಳನ್ನು ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಧರಣಿಗೂ ಮುನ್ನ ಇಲ್ಲಿನ ವಿವೇಕಾನಂದ ವೃತ್ತದ ಬಳಿಯಿಂದ ತಹಶೀಲ್ದಾರ್ ಕಚೇರಿಗೆ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆದಕಲ್ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಗಣೇಶ್, ತಾಲೂಕು ಅಧ್ಯಕ್ಷ ಸುನಿಲ್‍ಕುಮಾರ್, ಮಹಿಳಾ ಘಟಕದ ಕಾರ್ಯದರ್ಶಿ ವಿಮಲಾಕ್ಷಿ, ಪದಾಧಿಕಾರಿಗಳಾದ ಎಸ್. ಪೂವಯ್ಯ, ಬಿ.ಕೆ. ವಿಠಲ್, ರಾಮಣ್ಣ, ಬೋಜಪ್ಪ, ಲಲಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.