ಶ್ರೀಮಂಗಲ, ನ. 19: ಕೊಡಗು ಜಿಲ್ಲೆಯಲ್ಲಿ ನದಿ, ತೋಡು, ಕೆರೆಗಳಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ನೀರು ಬಳಸಬಾರದು ಎನ್ನುವ ಮೂಲಕ ಅಧಿಕಾರಿಗಳು ಜಿಲ್ಲೆಯ ರೈತರು ಹಾಗೂ ಬೆಳೆಗಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಅಣೆಕಟ್ಟುಗಳ ಮೂಲಕ ಕೃಷಿ ಹಾಗೂ ತೋಟಗಾರಿಕೆಗಳಿಗೆ ಹೊರಜಿಲ್ಲೆಗಳಲ್ಲಿ ನೀರು ಬಳಸುತ್ತಿರುವಾಗ ಜಿಲ್ಲೆಯ ಬೆಳೆಗಾರರ ಮೇಲೆ ಈ ರೀತಿಯ ಕಿರುಕುಳವನ್ನು ನಿಲ್ಲಿಸಿ, ಜಿಲ್ಲೆಯ ರೈತರ ಕೃಷಿ ಹಾಗೂ ತೋಟಗಾರಿಕಾ ಬೆಳೆ ಸಂರಕ್ಷಣೆಗೆ ನೀರು ಬಳಸಲು ಯಾವದೇ ತಡೆ ಮಾಡಬಾರದೆಂದು ಜಿಲ್ಲಾ ಸಾರ್ವಜನಿಕಾ ಹಿತರಕ್ಷಣಾ ಸಮಿತಿಯ ಪ್ರಮುಖರು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ವೀಣಾ ಅಚ್ಚಯ್ಯ ಅವರನ್ನು ಭೇಟಿ ಮಾಡಿದ ನಿಯೋಗ ಕಾವೇರಿ ನದಿ ಹುಟ್ಟಿದ ಜಿಲ್ಲೆಯಲ್ಲಿ ಕಾವೇರಿ ನದಿ ಪಾತ್ರದ ಜಿಲ್ಲೆಯ ರೈತರಿಗೆ ನದಿ ಹಾಗೂ ತೋಡು ನೀರುಗಳನ್ನು ಮತ್ತು ತಾವೇ ನಿರ್ಮಿಸಿದ ಕೆರೆಯಲ್ಲಿ ಸಂಗ್ರಹವಾಗಿರುವ ನೀರನ್ನು ಕೃಷಿ ಚಟುವಟಿಕೆಗೆ ಬಳಸಲು ಹಕ್ಕು ಹೊಂದಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಭಿಸಿರುವ ರೈತರಿಗೆ ನೀರು ಬಳಸದಂತೆ ಸರಕಾರ ಯಾವದೇ ಅಭ್ಯಂತರ ಮಾಡಿದರೆ, ಈಗಾಗಲೆ ಹಲವಾರು ಸಮಸ್ಯೆ ಹಾಗೂ ಸಾಲಗಾರರಾಗಿರುವ ರೈತರು ಮತ್ತಷ್ಟು ಸಂಕಷ್ಟ ಎದುರಿಸಿದಂತಾಗುತ್ತದೆ. ಜಿಲ್ಲೆ ಬರಗಾಲಕ್ಕೆ ತುತ್ತಾಗಿದ್ದರೂ ಜಿಲ್ಲಾಡಳಿತ ನದಿ, ತೋಡು ಇತ್ಯಾದಿಗಳಿಗೆ ಚೆಕ್ ಡ್ಯಾಂ ಮಾಡಿ ನೀರು ಸಂಗ್ರಹಕ್ಕೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಕೃಷಿಗೆ ನೀರು ಬಳಸದಂತೆ ಕ್ರಮಕ್ಕೆ ಮುಂದಾದರೆ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಹೇಳಿದರು. ಪೊನ್ನಂಪೇಟೆ ಉಪನೊಂದಣಿ ಕಚೇರಿಯಲ್ಲಿ ನೊಂದಾವಣಿ ಕೆಲಸ ವಿಳಂಬವಾಗುತ್ತಿದೆ. ಬಿ.ಪಿ.ಎಲ್ ಕಾರ್ಡುಗಳು ಜಿಲ್ಲೆಯಲ್ಲಿ ಬಹುತೇಕ ಅನರ್ಹ ಫಲಾನುಭವಿಗಳ ಪಾಲಾಗಿರುವದು, ಜಿಲ್ಲೆಯಲ್ಲಿ ಅನಿಯಮಿತ ವಿದ್ಯುತ್ ಕಡಿತ, ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ದೂರಿನ ಮೇರೆ ವರ್ಗಾವಣೆಗೊಂಡಿದ್ದ ಶಿರಸ್ತೇದಾರರನ್ನು ಮತ್ತೆ ಕಛೇರಿಗೆ ನಿಯೋಜನೆಗೊಳಿಸದಂತೆ ಈ ಸಂದÀರ್ಭ ನಿಯೋಗ ವೀಣಾ ಅಚ್ಚಯ್ಯ ಅವರೊಂದಿಗೆ ಚರ್ಚಿಸಿತು.

ಮನವಿಯನ್ನು ಸ್ವೀಕರಿಸಿದ ವೀಣಾ ಅಚ್ಚಯ್ಯ ಅವರು, ಇವೆಲ್ಲಾ ವಿಚಾರಗಳ ಬಗ್ಗೆ ಅಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದÀರ್ಭ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಪದಾಧಿಕಾರಿಗಳಾದ ಕೊಟ್ಟಂಗಡ ಮಾಚಯ್ಯ, ಅಜ್ಜಮಾಡ ಬೆಳ್ಯಪ್ಪ, ಡಿ.ಸಿ.ಸಿ. ಪ್ರಮುಖ ಚಕ್ಕೇರ ವಾಸು ಕುಟ್ಟಪ್ಪ ಹಾಜರಿದ್ದರು.