ವೀರಾಜಪೇಟೆ, ನ. 16: ಜಿಲ್ಲಾ ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಸ್ಥಾನಮಾನದ ಬಗೆಗಿನ ಚರ್ಚೆ ದಿನೇದಿನೇ ಉಲ್ಬಣಗೊಳ್ಳುತ್ತಿದ್ದು, ಪಾರಂಪರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾ ಬಂದಿರುವ ಜಿಲ್ಲೆಯ ಪ್ರಮುಖ ಸಮುದಾಯ ಒಂದು ಇದೀಗ ತಮ್ಮ ಜನಾಂಗಕ್ಕೆ ಕಾಂಗ್ರೆಸ್ ಪಕ್ಷ ನೀಡಿರುವ ಕೊಡುಗೆ ಬಗ್ಗೆ ಪ್ರಶ್ನಿಸಲಾರಂಭಿಸಿದೆ.

ಇತ್ತೀಚೆಗೆ ರಾಜ್ಯದ ನಿಗಮ-ಮಂಡಳಿಗಳಿಗೆ ನಡೆದಿರುವ ನೇಮಕಾತಿಯ ಬೆನ್ನಲ್ಲೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಎರಡನೇ ಹಂತದ ನಾಯಕರುಗಳೂ ಇತ್ತೀಚೆಗೆ ವೀರಾಜಪೇಟೆಯ ಹೊರವಲಯದಲ್ಲಿ ಗುಪ್ತ ಸಭೆಯೊಂದನ್ನು ನಡೆಸಿ ಮುಂದಿನ ಹೆಜ್ಜೆ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕಳೆದ 11 ತಿಂಗಳುಗಳಿಂದ ಖಾಲಿ ಬಿದ್ದಿರುವ ಜಿಲ್ಲಾ ಅಧ್ಯಕ್ಷಸ್ಥಾನ ತಮ್ಮ ಸಮುದಾಯವರಿಗೆ ಲಭಿಸಬೇಕೆಂದೂ, ನ್ಯಾಯಯುತವಾದ ತಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದಲ್ಲಿ ಪಕ್ಷವು ಅದರ ಪರಿಣಾಮವನ್ನು ಭವಿಷ್ಯದಲ್ಲಿ ಅನುಭವಿಸ ಬೇಕಾದೀತೆಂದೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂರವರನ್ನು ಭೇಟಿ ಮಾಡಲು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕೆ.ಎ.ಯಾಕೂಬ್‍ರವರು ಬೆಂಗಳೂರಿಗೆ ತೆರಳಿದಾಗ ಸಚಿವರು ಯಾಕೂಬ್ ರೊಂದಿಗೆ ಸ್ಪಂದಿಸಲಿಲ್ಲವೆಂದು ಮುಖಂಡರುಗಳು ವಿವರಿಸಿದ್ದಾರೆ. ಪ್ರತಿಕ್ರಿಯೆ ಎಂಬಂತೆ ಸಚಿವರ ಮುಂದಿನ ಜಿಲ್ಲಾ ಭೇಟಿ ಸಂದರ್ಭ ಕಪ್ಪು ಪಟ್ಟಿ ಧರಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ತೀರ್ಮಾನಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಜನಾಂಗೀಯವಾದ ಹೆಚ್ಚುತ್ತಿದೆಯೆಂದೂ ವಿಧಾನಪರಿಷತ್ ಸದಸ್ಯತನದಿಂದ ಹಿಡಿದು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವೂ ಒಂದು ನಿರ್ಧಿಷ್ಟ ಕೋಮಿನವರಿಗೆ ಮಾತ್ರ ನೀಡಲಾಗುತ್ತಿದೆ ಯೆಂಬ ಆರೋಪ ಕೇಳಿಬರುತ್ತಿದೆ. ಪಕ್ಷವು ಇತ್ತೀಚೆಗೆ ನೀಡಿದ ಮೂರು ಪ್ರಮುಖ ಹುದ್ದೆಗಳಲ್ಲಿ ಎರಡನ್ನು ಒಂದು ನಿರ್ಧಿಷ್ಟ ಕೋಮಿನವರಿಗೆ ನೀಡಲಾಗಿದೆ. ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಸ್ಥಾನ ಮಾತ್ರ ಅಲ್ಪಸಂಖ್ಯಾತ ಸಮುದಾಯದವರು ಹೊಂದಿದ್ದು , ಆ ಸ್ಥಾನದ ಮೇಲೂ ಬಹುಸಂಖ್ಯಾತರ ಕಣ್ಣು ಇದೆ. ಈ ಬಗ್ಗೆ ಹಲವು ಕಡೆಗಳಿಂದ ಒತ್ತಡ ಹಾಕುವದರ ಮೂಲಕ ಪಕ್ಷದ ಅವನತಿಗೆ ಕಾರಣವಾಗುತ್ತಿದ್ದಾರೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಜೀತದಾಳುಗಳಲ್ಲ ವೆಂದೂ, ಕೇವಲ ಮತ ಹಾಕುವ ಚೇಲಾಗಳಲ್ಲವೆಂಬದನ್ನೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನ ಗುತ್ತಿಗೆದಾರರಂತೆ ವರ್ತಿಸುವ ನಾಯಕರುಗಳಿಗೆ ಮನವರಿಕೆಯಾಗಲಿದೆಯೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಕೆಲವರಂತೂ ತಮ್ಮ ಸ್ಥಾನತ್ಯಾಗಕ್ಕೂ ತಯಾರಾಗಿದ್ದಾರೆ.

ಜಿಲ್ಲಾ ಪಂಚಾಯಿತಿ ಚುನಾವಣೆ ಯಲ್ಲಿ ಅಲ್ಪಸಂಖ್ಯಾತರು ಪಕ್ಷಕ್ಕೆ ಮತ ನೀಡಿದುದರಿಂದ ಕಳೆದ ಸಾಲಿಗಿಂತಲೂ ಹೆಚ್ಚು ಸ್ಥಾನಗಳು ದೊರೆಯುವಂತಾಗಿದೆ. ಈ ವಿಚಾರವನ್ನು ಪಕ್ಷದ ಪ್ರಮುಖರು ಗಮನದಲ್ಲಿರಿಸಬೇಕೆಂದೂ ಕೆಲವರು ಹೇಳಿದ್ದಾರೆ.

ಜಿಲ್ಲೆಯ ಅಲ್ಪಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಯಾವದೇ ಭಿನ್ನತೆಗಳಿಲ್ಲ. ಆದರೆ ಅಸಮಾಧಾನವಿದೆ. ಜಿಲ್ಲೆಯ ಅಲ್ಪಸಂಖ್ಯಾತ ಕಾಂಗ್ರೆಸಿಗರಲ್ಲಿ “ಎಪಿ ಬಣ ಮತ್ತು ಇಕೆ ಬಣ” ಎಂಬ ವಿಭಾಗೀಯತೆ ಇದೆಯೆಂದೂ, ಪ್ರಮುಖ ಸ್ಥಾನಗಳಿಂದ ಇವರನ್ನು ದೂರವಿಡಬೇಕೆಂದು ಬಯಸುವವರೂ ಪಕ್ಷದಲ್ಲಿ ಇದ್ದಾರೆ. ಇವರು ಮುಗ್ಧ ಕಾಂಗ್ರೆಸ್ ಮತದಾರರನ್ನು ಗೊಂದಲಕ್ಕೀಡು ಮಾಡುವದರ ಮೂಲಕ ಇತರ ಪಕ್ಷಗಳಿಗೆ ಪರೋಕ್ಷವಾಗಿ ನೆರವಾಗುತ್ತಿದ್ದಾರೆ.

ಸಭೆಯಲ್ಲಿ ಪಕ್ಷದ ಅಲ್ಪಸಂಖ್ಯಾತ ಪ್ರಮುಖರಾದ ಆರ್.ಕೆ.ಅಬ್ದುಲ್ ಸಲಾಂ, ಅಬ್ದುಲ್ ರೆಹೆಮಾನ್ ನಾಪೋಕ್ಲು, ಕೆ.ಎ. ಯಾಕೂಬ್, ಡಿ.ಎ.ಎಜಾಝ್ ಅಹಮದ್, ಗೋಣಿಕೊಪ್ಪಲಿನ ವಿ.ಕೆ.ಪೋಕುಟ್ಟಿ, ಬಾಪ್ಪು, ಬಷೀರ್ ಎಡಪಾಲ, ಹ್ಯಾರಿಸ್ ಕೊಳಕೇರಿ, ಬಷೀರ್ ಕುಂಜಿಲ, ಖಾಲಿದ್ ಹಾಕತ್ತೂರು ಹಾಗೂ ಹಾಶಿಂ ಕಡಂಗ ಸೇರಿದಂತೆ ಇನ್ನಿತರ ಪ್ರಮುಖರು, ಕಾರ್ಯಕರ್ತರು ಹಾಜರಿದ್ದುದಾಗಿ ತಿಳಿದು ಬಂದಿದೆ.