ಸೋಮವಾರಪೇಟೆ,ಜೂ.12: ಸೋಮವಾರಪೇಟೆ-ಮಡಿಕೇರಿ ಮಾರ್ಗ ಮಧ್ಯೆ ಸಿಗುವ ಐಗೂರು ಗ್ರಾಮದ ಕಬ್ಬಿಣ ಸೇತುವೆಯ ಒಂದು ಪಾಶ್ರ್ವ ಕುಸಿಯುವ ಹಂತದಲ್ಲಿದ್ದು, ಚಾಲಕರು ಕೊಂಚ ಎಚ್ಚರ ತಪ್ಪಿದರೂ ಮೃತ್ಯುವಿಗೆ ಆಹ್ವಾನ ಶತಃಸಿದ್ಧ ಎಂಬಂತಾಗಿದೆ. ತಿರುವಿನಲ್ಲಿರುವ ಈ ಸೇತುವೆಗೆ ಅಳವಡಿಸಿರುವ ಮೋರಿ ಈಗಾಗಲೇ ಬಿರುಕುಬಿಟ್ಟಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಕಣ್ಮುಚ್ಚಿ ಕುಳಿತಿರುವಂತೆ ಕಂಡುಬರುತ್ತಿದೆ.

ಐಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕಬ್ಬಿಣ ಸೇತುವೆ ಮಡಿಕೇರಿ-ಸೋಮವಾರಪೇಟೆ ಮುಖ್ಯರಸ್ತೆಯಲ್ಲಿದ್ದು, ದಿನಂಪ್ರತಿ ನೂರಾರು ಬಸ್‍ಗಳೂ ಸೇರಿದಂತೆ ಸಾವಿರಾರು ವಾಹನಗಳ ಓಡಾಟವಿದೆ. ಬೃಹತ್ ವಾಹನಗಳು, ಸರಕು ಸಾಗಾಣೆಯ ವಾಹನಗಳೂ ಸಹ ಇದೇ ರಸ್ತೆಯನ್ನು ಅವಲಂಭಿಸಿದ್ದು, ಐಗೂರು ಗ್ರಾಮದ ತಿರುವಿನಲ್ಲಿ ಎದುರಾಗುವ ಕಬ್ಬಿಣ ಸೇತುವೆಯ ಒಂದು ಭಾಗ ಇದೀಗ ಶಿಥಿಲಾವಸ್ಥೆಗೆ ತಲುಪಿದೆ.

ಸ್ವಾತಂತ್ರ್ಯಪೂರ್ವಕ್ಕೂ ಮೊದಲೇ (ಬ್ರಿಟೀಷರಿಂದ) ನಿರ್ಮಾಣವಾಗಿರುವ ಕಬ್ಬಿಣ ಸೇತುವೆ ಇಂದಿಗೂ ಗಟ್ಟಿಮುಟ್ಟಾಗಿದ್ದರೂ ಸಹ ವಾಹನಗಳ ಸುಗಮ ಸಂಚಾರಕ್ಕೆ ಮಾತ್ರ ತೊಡಕಾಗಿಯೇ ಉಳಿದಿದೆ. ಅತ್ಯಂತ ಕಿರಿದಾಗಿರುವ ಸೇತುವೆಯಲ್ಲಿ ಒಮ್ಮೆಲೆ ಎರಡು ವಾಹನಗಳು ಚಲಿಸುವದು ಅಸಾಧ್ಯವಾಗಿದೆ.

ಒಂದು ಬದಿಯಿಂದ ವಾಹನ ಆಗಮಿಸಿದರೆ ಈ ತುದಿಯಲ್ಲಿರುವ ವಾಹನ ಪಕ್ಕದಲ್ಲಿ ನಿಲ್ಲಬೇಕಾಗಿದೆ. ಒಮ್ಮೊಮ್ಮೆ ಎರಡೂ ವಾಹನಗಳು ಸೇತುವೆಯ ಮಧ್ಯಭಾಗಕ್ಕೆ ಬಂದು ಹಿಂಬದಿ ಚಲಿಸುವ ಸಂದರ್ಭ ಸಣ್ಣಪುಟ್ಟ ಅವಘಡಗಳು ಮಾಮೂಲಾಗಿದ್ದರೆ, ಸ್ಥಳಾವಕಾಶ ನೀಡುವ ವಿಚಾರಕ್ಕೆ ಎರಡೂ ವಾಹನಗಳ ಚಾಲಕರ ನಡುವೆ ಆಗಾಗ್ಗೆ ಘರ್ಷಣೆಗಳೂ ನಡೆಯುತ್ತಿರುತ್ತವೆ. ಈ ಸೇತುವೆಯ ಬದಲಿಗೆ ನೂತನ ಸೇತುವೆ ನಿರ್ಮಿಸುವಂತೆ ಹಲವು ಬಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ.

ಇದೀಗ ಕಬ್ಬಿಣ ಸೇತುವೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ಮೋರಿ ಬಿರುಕುಬಿಟ್ಟಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಅತ್ಯಂತ ಕ್ಲಿಷ್ಟಕರ ತಿರುವಿನಲ್ಲಿ ಮೋರಿ ಬಿರುಕು ಬಿಟ್ಟಿರುವದರಿಂದ ವಾಹನಗಳ ಓಡಾಟಕ್ಕೆ ಸಂಚಕಾರವಾಗಿದೆ. ಚಾಲಕ ಕೊಂಚ ಎಚ್ಚರ ತಪ್ಪಿದರೂ ಸುಮಾರು 30 ಅಡಿ ಆಳದ ಗುಂಡಿಗೆ ಬೀಳುವ ಸಾಧ್ಯತೆಯಿದೆ.

ಮೋರಿಯ ಕೆಳಭಾಗ ಬೃಹತ್ ಗುಂಡಿಯಿದ್ದು ಯಾವ ಸಮಯದಲ್ಲಿ ಕೆಳ ಬೀಳುವದೋ ಎಂಬ ಆತಂಕ ಎದುರಾಗಿದೆ. ಕಬ್ಬಿಣ ಸೇತುವೆಯ ಮೇಲೆ ಬೃಹತ್ ವಾಹನಗಳು ಸಂಚರಿಸುವ ಸಂದರ್ಭ ಸೇತುವೆ ಅಲುಗಾಡುತ್ತಿದ್ದು, ಈ ಸೇತುವೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ಮೋರಿಯೂ ಕುಸಿಯುವ ಸಾಧ್ಯತೆಯಿದೆ ಎಂದು ಸ್ಥಳೀಯ ನಿವಾಸಿ ಅವಿಲಾಷ್ ಅಭಿಪ್ರಾಯಿಸಿದ್ದಾರೆ.

ಒಟ್ಟಾರೆ ಕಬ್ಬಿಣ ಸೇತುವೆಯ ಒಂದು ಪಾಶ್ರ್ವ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಅಭಿಯಂತರರು ಕಣ್ಮುಚ್ಚಿ ಕುಳಿತಿದ್ದಾರೆ. ಅನಾಹುತ ಸಂಭವಿಸಿದ ಮೇಲೆ ಪರಿತಪಿಸುವ ಬದಲು, ಅನಾಹುತಕ್ಕೂ ಮೊದಲೇ ಎಚ್ಚೆತ್ತುಕೊಳ್ಳುವದು ಜಾಣತನ. ಈ ಜಾಣತನವನ್ನು ಲೋಕೋಪಯೋಗಿ ಇಲಾಖೆ ಪ್ರದರ್ಶಿಸುತ್ತದೆಯೇ? ಎಂಬದನ್ನು ಕಾದು ನೊಡಬೇಕಿದೆ. - ವಿಜಯ್ ಹಾನಗಲ್