ಕುಶಾಲನಗರ, ಜೂ. 12 : ಮಡಿಕೇರಿ ವಿಭಾಗದ ಅರಣ್ಯ ವಲಯಗಳಲ್ಲಿ ಈ ಸಾಲಿನಲ್ಲಿ ಅಂದಾಜು 10ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಮಡಿಕೇರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ. ಪರಿಸರ ಜಾಗೃತಿ ಅಂಗವಾಗಿ ಕುಶಾಲನಗರದ ಆರ್‍ಎಂಸಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ 4 ಲಕ್ಷ ಗಿಡಗಳನ್ನು ನೆಡಲಾಗಿದೆ. ಇಲಾಖೆಯಿಂದ ಇನ್ನೂ 4 ಲಕ್ಷ ಗಿಡಗಳನ್ನು ನೆಡಲು ಅನುದಾನ ದೊರಕಿದೆ ಎಂದು ಮಾಹಿತಿ ನೀಡಿದರು.

ಹಲವು ಕಾರಣಗಳಿಂದ ಕೊಡಗು ಜಿಲ್ಲೆಯಲ್ಲಿ ಪರಿಸರಕ್ಕೆ ಹಾನಿ ಉಂಟಾಗುತ್ತಿದ್ದು ಸಂಘ ಸಂಸ್ಥೆಗಳು ಪರಿಸರ ಪ್ರೇಮಿಗಳು ಇಲಾಖೆ ಯೊಂದಿಗೆ ಕೈ ಜೋಡಿಸಿ ಪರಿಸರ ಜಾಗೃತಿ ಮೂಡಿಸಿದಲ್ಲಿ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು. ಕಾವೇರಿ ನದಿ ತಟದಲ್ಲಿ ಲಕ್ಷವೃಕ್ಷ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದ್ದು ಬಿದಿರು, ಹೊಂಗೆ, ಹಲಸು, ಬೇವು ಮತ್ತಿತರ ಜಾತಿಯ ಗಿಡಗಳನ್ನು ನೆಡಲಾಗುವದು. ಕುಶಾಲನಗರದ ಆರ್‍ಎಂಸಿ ಆವರಣದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ 850ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು ಎಂದರು. ಈ ಸಂದರ್ಭ ಕುಶಾಲನಗರ ಅರಣ್ಯ ವಲಯಾಧಿಕಾರಿ ಎಂ.ಎಸ್ ಚಿಣ್ಣಪ್ಪ, ತಹಶೀಲ್ದಾರ್ ಹಾಗೂ ಆರ್‍ಎಂಸಿ ಆಡಳಿತಾಧಿಕಾರಿ ಶಿವಪ್ಪ ಇದ್ದರು.