ಶ್ರೀಮಂಗಲ, ಡಿ.2 : ಬರಗಾಲಕ್ಕೆ ತುತ್ತಾಗಿ ಪ್ರಸಕ್ತ ವರ್ಷದ ಕಾಫಿ ಫಸಲು ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ. ಆದರೆ ವಾಸ್ತವಾಂಶವನ್ನು ಮರೆಮಾಚಿರುವ ಕಾಫಿ ಮಂಡಳಿ, ತಮ್ಮ ಸಮೀಕ್ಷಾ ವರದಿಯಲ್ಲಿ ನಷ್ಟದ ಪ್ರಮಾಣವನ್ನು ಕನಿಷ್ಟವೆಂದು ತೋರಿಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಇದರಿಂದ ಬೆಳೆಗಾರರಿಗೆ ಅನ್ಯಾಯವಾಗಿದ್ದು, ಇದರ ವಿರುದ್ದ ತಾ. 5ರಂದು ಶ್ರೀಮಂಗಲ ಕಾಫಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಲು

(ಮೊದಲ ಪುಟದಿಂದ) ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ತಿಳಿಸಿದ್ದಾರೆ.ಶ್ರೀಮಂಗಲ ಕಾಫಿ ಮಂಡಳಿ ಕಚೇರಿಗೆ ಬೆಳೆಗಾರರ ಒಕ್ಕೂಟದ ಪ್ರಮುಖರು ತೆರಳಿ, ಇಲ್ಲಿನ ಕಾಫಿ ಮಂಡಳಿ ಜೆ.ಎಲ್.ಓ. ರಮೇಶ್ ಅವರೊಂದಿಗೆ ಹಾಗೂ ಉಪನಿರ್ದೇಶಕ ಸತೀಶ್ ಚಂದ್ರ ಅವರೊಂದಿಗೆ ಈ ಬಗ್ಗೆ ಚರ್ಚಿಸಿದರು.

ಈ ಸಂಧರ್ಭ ಬೆಳೆಗಾರರ ಸಂಘಟನೆಗಳಿಗೆ ಹಾಗೂ ಬೆಳೆಗಾರರಿಗೆ ಯಾವದೇ ಮಾಹಿತಿ ನೀಡದೆ, ಬೆಳೆಗಾರರನ್ನು ಕತ್ತಲೆಯಲ್ಲಿಟ್ಟು ಕಾಫಿ ಮಂಡಳಿಯು, ಕಾಫಿ ನಷ್ಟದ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಈ ವರದಿ ವಾಸ್ತವಾಂಶವನ್ನು ಮರೆಮಾಚಿದೆ. ಇದರಿಂದ ಸರಕಾರಕ್ಕೆ ಕಾಫಿ ಬೆಳೆಗಾರರ ಸಂಕಷ್ಟದ ಪರಿಸ್ಥಿತಿ ಅರಿವಿಗೆ ಬರುವದಿಲ್ಲ. ಬದಲಿಗೆ ಕಾಫಿ ಫಸಲು ನಷ್ಟವಾಗಿಲ್ಲ ಎನ್ನುವ ವರದಿಯಿಂದ ಕಾಫಿ ಬೆಳೆಗಾರರಿಗೆ ಯಾವದೇ ಸೌಲಭ್ಯ ಸರಕಾರದಿಂದ ದೊರೆಯದಂತೆ ಆಗುತ್ತದೆ. ಬರಗಾಲಕ್ಕೆ ತುತ್ತಾಗಿ ಕೃತಕ ನೀರಾವರಿ ಸೌಲಭ್ಯವನ್ನು ತೋಟಕ್ಕೆ ಒದಗಿಸಲು ಸಾಧ್ಯವಾಗದೆ ಅಪಾರ ಪ್ರಮಾಣದಲ್ಲಿ ಕಾಫಿ ನಷ್ಟವಾಗಿದೆ. ಪ್ರತಿ ಎಕ್ರೆಗೆ ಬಹಳಷ್ಟು ಕಡೆ 5 ಚೀಲ ಕಾಫಿಯು ಸಹ ಆಗುವದಿಲ್ಲ. ಇದರಿಂದ ಕಾಫಿ ತೋಟದ ನಿರ್ವಹಣೆ ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ ಎಂದು ಬೆಳೆಗಾರರ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.ಕಾಫಿ ಮಂಡಳಿಯ ವರದಿಯಿಂದ ಬೆಳೆಗಾರರು ಸುಸ್ಥಿತಿಯಲ್ಲಿದ್ದಾರೆ ಎನ್ನುವ ಅರ್ಥ ಬರುತ್ತದೆ. ಸರಕಾರದ ಯಾವದೇ ಸೌಲಭ್ಯ ಹಾಗೂ ಕಾಫಿ ಬೆಳೆಗಾರರ ಸಾಲ ಮನ್ನ ಮಾಡುವ ನಿಟ್ಟಿನಲ್ಲಿಯೂ ವಾಸ್ತವಾಂಶದ ವರದಿ ಸರಕಾರಕ್ಕೆ ಸಲ್ಲಿಕೆಯಾಗಬೇಕು. ಈ ನಿಟ್ಟಿನಲ್ಲಿ ಬೆಳೆಗಾರರಿಗೆ ಮಾಹಿತಿ ನೀಡಿ ನಷ್ಟದ ಮರುಸಮೀಕ್ಷೆ ನಡೆಸಬೇಕು. ಬೆಳೆಗಾರ ಒಕ್ಕೂಟದ ಸಮಕ್ಷಮದಲ್ಲೇ ತೋಟಗಳಿಗೆ ಭೇಟಿ ನೀಡಿ ನಷ್ಟದ ಪ್ರಮಾಣವನ್ನು ದಾಖಲಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒಕ್ಕೂಟದ ಪ್ರಮುಖರು ಆಗ್ರಹಿಸಿದರು.

ಈ ಸಂದರ್ಭ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಸದಸ್ಯರುಗಳಾದ ಕಳ್ಳೇಂಗಡ ಸುರೇಶ್, ಪೆಮ್ಮಣಮಾಡ ರಮೇಶ್, ಬಲ್ಯಮೀದೇರಿರ ಮೋಹನ್ ಕುಮಾರ್ ಮತ್ತಿತರರು ಹಾಜರಿದ್ದರು.

ಕಾಫಿ ಬೆಳೆಗಾರರು ಕಳೆದ 2 ದಶಕದಿಂದ ಉತ್ಪಾದನಾ ವೆಚ್ಚ ಹೆಚ್ಚಳ, ಹವಾಮಾನ ವೈಪರೀತ್ಯ ಇತ್ಯಾದಿ ಸಮಸ್ಯೆಗಳಿಂದ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಿ, ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕೆಂದು ಬೆಳೆಗಾರರ ಒಕ್ಕೂಟದ ಬೇಡಿಕೆಯ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಹಲವು ಬಾರಿ ಮನವಿ ಸಲ್ಲಿಸಿ ಚರ್ಚಿಸಲಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಮತ್ತು ವಾಣಿಜ್ಯ ಸಚಿವರನ್ನು ಸಂಸದರ ಮೂಲಕ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಸಂಸದರು ಕೇಂದ್ರ ಸರಕಾರಕಾರದೊಂದಿಗೆ ನಿರಂತರ ಸಂಪರ್ಕದೊಂದಿಗೆ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವದಾಗಿ ತಿಳಿಸಿದ್ದಾರೆ. ಸಂಸದರು ರಾಜ್ಯದ ಇತರ ಕಾಫಿ ಬೆಳೆಯುವ ಸಂಸದರೊಂದಿಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಶಂಕರು ನಾಚಪ್ಪ ತಿಳಿಸಿದ್ದಾರೆ.

ಸರಕಾರಕ್ಕೆ ಕಾಫಿ ಬೆಳೆಗಾರರ ವಾಸ್ತವಾಂಶದ ಬಗ್ಗೆ ಸರಿಯಾದ ವರದಿ ಕಾಫಿ ಮಂಡಳಿಯಿಂದ ಸಲ್ಲಿಕೆಯಾಗಬೇಕು. ಕಾಫಿ ಮಂಡಳಿಯ ವರದಿಯನ್ನು ಪರಿಗಣಿಸಿಯೇ ಬೆಳೆಗಾರರ ಸಾಲ ಮನ್ನಾ ಮಾಡುವ ಹಾಗೂ ಇತರ ಪೂರಕ ಯೋಜನೆ ರೂಪಿಸಲು ಸರಕಾರಕ್ಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾಫಿ ಮಂಡಳಿ ಬೆಳೆಗಾರರ ವಾಸ್ತವಾಂಶದ ಬಗ್ಗೆ ವರದಿ ಸಲ್ಲಿಸುವದು ಅತ್ಯಂತ ಪ್ರಾಮುಖ್ಯತೆ ಹೊಂದಿದೆ ಎಂದು ಹೇಳಿದರು.