ಸಿದ್ದಾಪುರ, ಜ. 1: ಗುಹ್ಯ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಸಾಮಗ್ರಿಗಳಿಗೆ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ನೀಡಿದ ಅರ್ಜಿಯ ಬಗ್ಗೆ ಗ್ರಾ.ಪಂ. ಸಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ, ನ್ಯಾಯ ಬೆಲೆ ಅಂಗಡಿ ಪರಿಶೀಲಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರ ಅರ್ಜಿಯ ಬಗ್ಗೆ ಚರ್ಚಿಸಲಾಯಿತು. ಗುಹ್ಯ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಸಾಮಗ್ರಿಗಳಿಗೆ ಸರಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡಲಾಗುತ್ತಿದೆ. ಪ್ರತಿ ಪಡಿತರ ಚೀಟಿ ಹೊಂದಿರುವವರಿಂದ ಸಾಗಾಟ ವೆಚ್ಚ ಎಂದು ಹೆಚ್ಚು ಹಣ ಪಡೆಯಲಾಗುತ್ತಿದೆ. ಮಾತ್ರವಲ್ಲದೇ ನ್ಯಾಯ ಬೆಲೆ ಅಂಗಡಿಯು ದಿನವಿಡೀ ಮುಚ್ಚಲಾಗಿದ್ದು, ಸಂಜೆ 6 ಗಂಟೆ ಮೇಲೆ ಮಾತ್ರ ತೆರೆಯಲಾಗುತ್ತಿದ್ದು, ತೀವ್ರ ತೊಂದರೆಯಾಗುವ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿ, ಗ್ರಾ.ಪಂ.ನ ಉತ್ಪಾದನ ಸಮಿತಿಯ ತಂಡ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ನ್ಯಾಯ ಬೆಲೆ ಅಂಗಡಿಯ ಮೇಲೆ ಕ್ರಮ ಕೈಗೊಳ್ಳಲು ಆಹಾರ ಇಲಾಖೆಗೆ ಶಿಫಾರಸ್ಸು ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಈ ಹಿಂದೆಯೂ ಕೂಡ ಗುಹ್ಯದ ನ್ಯಾಯ ಬೆಲೆ ಅಂಗಡಿಯ ವಿರುದ್ಧ ಗ್ರಾಮಸ್ಥರು ಪಂಚಾಯಿತಿಗೆ ಹಾಗೂ ಆಹಾರ ಇಲಾಖೆಗೆ ದೂರು ನೀಡಿದ್ದರು.

ಸಭೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರು ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಬೇಸಿಗೆ ಆರಂಭವಾಗುತ್ತಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ಗೂಡಂಗಡಿಗಳು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ದೂರು ಬಂದಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಿದ್ದಾಪುರ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಬಗ್ಗೆ ಚರ್ಚಿಸಿ , ಈಗಾಗಲೇ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಪೈಸಾರಿ ಜಾಗ ನೀಡುವ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದು ಪಿ.ಡಿ.ಓ. ವಿಶ್ವನಾಥ್ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭ 14 ನೇ ಹಣಕಾಸಿನ ಹೆಚ್ಚುವರಿ ಅನುದಾನ, ವಸತಿ ಯೋನೆಯ ಅನುಷ್ಠಾನ, ಎಂ.ಜಿ.ಎನ್.ಆರ್.ಇ.ಜಿ ಯೋಜನೆಯ ಅನುಷ್ಠಾನ ಬಗ್ಗೆ ಚರ್ಚಿಸಲಾಯಿತು.

ಪಿ.ಡಿ.ಓ. ವಿಶ್ವನಾಥ್ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ರಾಜೇಶ್ವರಿ ಸೇರಿದಂತೆ ಇತರ ಸದಸ್ಯರು ಹಾಜರಿದ್ದರು.