ಮಡಿಕೇರಿ, ಜೂ. 9: ನದಿಗಳ ಸಂರಕ್ಷಣೆಗಾಗಿ ದೇಶದ ಪವಿತ್ರ ನದಿಗಳನ್ನು ರಾಷ್ಟ್ರೀಕರಣಗೊಳಿಸುವದು ಸೂಕ್ತವೆಂದು ಅಭಿಪ್ರಾಯಪಟ್ಟಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ರಮಾನಂದ ಸ್ವಾಮೀಜಿ ತಾ. 15 ರಿಂದ ಸತತ 60 ದಿನಗಳ ಕಾಲ ಪಾದಯಾತ್ರೆ ಮಾಡಿ ಕಾವೇರಿ ನದಿಯ ಸ್ವಚ್ಛತೆ ಮತ್ತು ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವದಾಗಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರದ ಗಮನ ಸೆಳೆಯಲು ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‍ಹಾರ್ ವರೆಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಮೂಲಕ ಪಾದಯಾತ್ರೆ ನಡೆಸಲಾಗುವದೆಂದು ತಿಳಿಸಿದರು.

ತಾ. 15 ರಂದು ತಲಕಾವೇರಿ ಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಆಗಸ್ಟ್ 14 ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಪೂಂಪ್ ಹಾರ್‍ನಲ್ಲಿ ಅಂತ್ಯಗೊಳಿಸಲಾಗುವದು. ಸತತ 60 ದಿನಗಳ ಕಾಲ ಪಾದಯಾತ್ರೆ ಮಾಡಿ ನದಿ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವದು ಎಂದರು. ನದಿ ಮತ್ತು ಸುತ್ತಮುತ್ತಲ ಪ್ರದೇಶದ ಪರಿಸ್ಥಿತಿಯನ್ನು ವೀಡಿಯೋ ಹಾಗೂ ಛಾಯಾಚಿತ್ರದ ಮೂಲಕ ದಾಖಲಿಸಿ ಸಮಗ್ರ ವರದಿಯನ್ನು ಸರಕಾರಕ್ಕೆ ನೀಡಲಾಗುವದು. ಕರ್ನಾಟಕ ರಾಜ್ಯದಲ್ಲಿ ನೀರಿನ ಉತ್ಪಾದನೆ ಬಗ್ಗೆ ಕಾಳಜಿ ವಹಿಸಬೇಕಾಗಿದ್ದು, ತಮಿಳುನಾಡಿನಲ್ಲಿ ನೀರಿನ ಸಂರಕ್ಷಣೆ ಕುರಿತು ಗಮನ ಹರಿಸಬೇಕಾಗಿದೆ. ಕಾವೇರಿ ನದಿ ಸ್ವಚ್ಛತೆ ಬಗ್ಗೆ ಈ ಎರಡೂ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಮನವರಿಕೆ ಮಾಡಿ ಕೊಡಲಾಗುವದೆಂದು ರಮಾನಂದ ಸ್ವಾಮೀಜಿ ಹೇಳಿದರು.

(ಮೊದಲ ಪುಟದಿಂದ)

ನದಿಗಳು ರಾಷ್ಟ್ರೀಕರಣಗೊಳ್ಳಲಿ

ಗಂಗಾ, ಗೋದಾವರಿ, ಯಮುನಾ, ಕಾವೇರಿ ಸೇರಿದಂತೆ ದೇಶದ ಪ್ರಮುಖ ನದಿಗಳನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಒತ್ತಾಯಿಸಿದ ಅವರು ಹೀಗೆ ಮಾಡುವ ದರಿಂದ ಮಾತ್ರ ನದಿಗಳ ಸಂರಕ್ಷಣೆ ಸಾಧ್ಯವೆಂದು ಅಭಿಪ್ರಾಯಪಟ್ಟರು. ಪಾದಯಾತ್ರೆಯ ಮೂಲಕ ಸಂಗ್ರಹಿಸುವ ಕಾವೇರಿ ನದಿ ಸ್ಥಿತಿಗತಿಯ ವರದಿಯಾಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಲಾಗುವದೆಂದು ಸ್ವಾಮೀಜಿ ತಿಳಿಸಿದರು.

ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ ವಿಶೇಷವಾಗಿ ಕೊಡಗು ಜಿಲ್ಲೆಯ ಅರಣ್ಯ ಪರಿಸರ ಅಭಿವೃದ್ಧಿ ಹಾಗೂ ಕಾವೇರಿ ನದಿ ತಟದ ಅಭಿವೃದ್ಧಿ ಯೋಜನೆಗಳಿಗೆ ಒಂದು ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೆಜ್ ನೀಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವದು ಎಂದರು.

ದಕ್ಷಿಣ ಭಾರತದ ಕೋಟ್ಯಾಂತರ ಜನಜಾನುವಾರುಗಳ ಜೀವನದಿ ಕಾವೇರಿ ಕಲುಷಿತಗೊಳ್ಳುವದರೊಂದಿಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರು ವದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು. ತಲಕಾವೇರಿಯಿಂದ ಸಮುದ್ರ ಸೇರುವ ತನಕ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನದಿ ಪಾತ್ರದ ಅಂದಾಜು 900 ಕಿಮೀ ಉದ್ದದ ನದಿ ದಂಡೆಗಳು ಖಾಸಗಿ ಒಡೆತನಕ್ಕೆ ಸೇರುವದ ರೊಂದಿಗೆ ನದಿ ಪಾತ್ರಗಳು ಸಂಪೂರ್ಣ ಮಲೀನಗೊಳ್ಳುತ್ತಿವೆ. ಎರಡು ರಾಜ್ಯಗಳ ಮೂಲಕ ಹರಿಯುವ ಕಾವೇರಿ ನದಿಯ ಸುಮಾರು 100 ಟಿಎಂಸಿ ಪ್ರಮಾಣದ ನೀರು ಸಮುದ್ರ ಪಾಲಾಗುತ್ತಿದೆ. ಇದನ್ನು ತಪ್ಪಿಸಿದಲ್ಲಿ ನದಿ ವ್ಯಾಜ್ಯಕ್ಕೆ ಪರಿಹಾರ ಸಿಗಬಹುದು. ಎರಡೂ ರಾಜ್ಯಗಳಲ್ಲಿ ನದಿಗೆ ಹಲವೆಡೆ ಚೆಕ್‍ಡ್ಯಾಂ ಗಳನ್ನು ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಹೆಚ್ಚಿಸುವ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದರು.

ನದಿ ತಟಗಳಲ್ಲಿ ನಿರ್ಮಾಣಗೊಂಡಿರುವ ಕೈಗಾರಿಕಾ ಕೇಂದ್ರಗಳಿಂದ ಉತ್ಪಾದನೆಗೊಳ್ಳುತ್ತಿರುವ ತ್ಯಾಜ್ಯಗಳು ನೇರವಾಗಿ ನದಿ ಸೇರುತ್ತಿವೆ. ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಜಲಚರಗಳು ಕೂಡ ಅವನತಿಯ ಹಂತದಲ್ಲಿವೆ. ಶುದ್ದ ಕಾವೇರಿ ನದಿ ನೀರಿನ ಗುಣಮಟ್ಟ ಇಂದು ವಿಷಕಾರಿಯಾಗಿ ಪರಿವರ್ತನೆ ಯಾಗುತ್ತಿದೆ ಎಂದು ಚಂದ್ರಮೋಹನ್ ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರದ ಪವಿತ್ರ ನದಿಗಳನ್ನು ರಾಷ್ಟ್ರೀಕರಣಗೊಳಿಸಿ ಸಂರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾವೇರಿ ಸ್ವಚ್ಚತಾ ಆಂದೋಲನ ಸಮಿತಿ, ಅಖಿಲ ಭಾರತ ಸನ್ಯಾಸಿ ಸಂಘ, ಅಣ್ಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಆಶ್ರಯದಲ್ಲಿ ಬೇಡಿಕೆ ಸಲ್ಲಿಸಲಾಗುತ್ತಿದೆ. ಈ ಸಂಘ ಸಂಸ್ಥೆಗಳ ಪ್ರಮುಖರು, ಎರಡು ರಾಜ್ಯಗಳ ಸಾಧುಸಂತರು ಹಾಗೂ ಆಂದೋಲನ ಸಮಿತಿಯ ಪ್ರಮುಖರು, ಕಾರ್ಯ ಕರ್ತರು ಪಾದಯಾತ್ರೆ ನಡೆಸುವ ಮೂಲಕ ಕಾವೇರಿ ಬಚಾವೋ ಆಂದೋಲನ ನಡೆಸಲಾಗುವದೆಂದು ಮಾಹಿತಿ ನೀಡಿದರು.

ಪಾದಯಾತ್ರೆ ಸಂದರ್ಭ ನದಿ ತಟಗಳ ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವದರೊಂದಿಗೆ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು. ಕೊಡಗು ಜಿಲ್ಲೆಯಲ್ಲಿ ಪಾದಯಾತ್ರೆ ಸಂದರ್ಭ ಕೊಡಗು ಜಿಲ್ಲಾ ಅರಣ್ಯ ಇಲಾಖೆ, ಮಡಿಕೇರಿ, ಕುಶಾಲನಗರ ರೋಟರಿ ಸಂಸ್ಥೆಗಳು ಮತ್ತು ಬೆಂಗಳೂರಿನ ಯುವಕರ ತಂಡ ಕೈಜೋಡಿಸುವದರೊಂದಿಗೆ ನದಿ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕೊಡಗು ಜಿಲ್ಲೆಯಲ್ಲಿ 5 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಜಿಲ್ಲೆಯ ಭಾಗಮಂಡಲ, ಅಯ್ಯಂಗೇರಿ, ಬಲ್ಲಮಾವಟಿ, ನೆಲಜಿ, ಎಮ್ಮೆಮಾಡು, ನಾಪೊಕ್ಲು, ಬಲಮುರಿ, ಬೇತ್ರಿ, ಕೊಂಡಂಗೇರಿ, ನೆಲ್ಲಿಹುದಿಕೇರಿ, ದುಬಾರೆ ಮೂಲಕ ಕುಶಾಲನಗರ ತಲುಪಲಿದೆ. ಜೂ. 20 ರಂದು ಜಿಲ್ಲೆಯಿಂದ ಮೈಸೂರು ಮೂಲಕ ಪಾದಯಾತ್ರೆ ಮುಂದುವರೆಯಲಿದೆ. ಕೊಡಗು ಜಿಲ್ಲೆಯಲ್ಲಿ ಪಾದಯಾತ್ರೆ ಸಂದರ್ಭ ಪಾಲ್ಗೊಳ್ಳಲು ಇಚ್ಛಿಸುವ ಸಂಘ ಸಂಸ್ಥೆಗಳು, ನಾಗರಿಕರು ತಾ. 13ರ ಒಳಗಾಗಿ ಮೊಬೈಲ್ ಸಂಖ್ಯೆ 9448274482ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.