ಮಡಿಕೇರಿ, ಅ. 28: ನಗರದ ಸ್ಥಳೀಯ ಸಂಸ್ಥೆಗಳ ಕಾರ್ಯ ವೈಖರಿಗಳು ಸರಿಯಾಗಿ ನಿಗದಿತ ವೇಳೆಯಲ್ಲಿ ಆಗುವ ಉದ್ದೇಶದಿಂದ ಪೂರ್ಣಗೊಂಡ ಪ್ರಶ್ನಾವಳಿಯನ್ನು ನಾಲ್ಕನೆಯ ರಾಜ್ಯ ಹಣಕಾಸು ಆಯೋಗಕ್ಕೆ ಶೀಘ್ರವಾಗಿ ಒದಗಿಸುವಂತೆ ಆಗಬೇಕು. ಈ ಬಗ್ಗೆ ಅಧಿಕಾರಿಗಳು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಸ್ಪಂದಿಸಬೇಕು ಎಂದು ರಾಜ್ಯ 4ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಆಯುಕ್ತರು, ಪೌರಾಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ವಿಧಿಸಿದ ತೆರಿಗೆಗಳು, ಸುಂಕಗಳು, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಸಮರ್ಪಕವಾಗಿ ಹಂಚಿಕೆಯಾಗಬೇಕೆಂಬ ಉದ್ದೇಶದಿಂದ ನಾಲ್ಕನೆಯ ರಾಜ್ಯ ಹಣಕಾಸು ಆಯೋಗವು ಶಿಫಾರಸ್ಸು ಮಾಡಲಿದ್ದು, ಎಲ್ಲಾ ಅಧಿಕಾರಿಗಳು ಜನ ಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ಮಾತನಾಡಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಮೂಲ ಸೌಕರ್ಯಗಳನ್ನು ನಿಭಾಯಿಸಲು ಅನುದಾನದ ಕೊರತೆ ಇದೆ. ಮುಖ್ಯವಾಗಿ ವೀರಾಜಪೇಟೆ ನಗರದ ರಸ್ತೆ ಅಭಿವೃದ್ದಿ, ಕುಡಿಯುವ ನೀರಿನ ಸೌಕರ್ಯ, ಬೀದಿ ದೀಪಗಳ ವ್ಯವಸ್ಥೆ ಹಾಗೂ ಒಳಚರಂಡಿಗಳ ಅಭಿವೃದ್ದಿ ಕಾರ್ಯಗಳು ಹೆಚ್ಚಿನದಾಗಿ ಆಗಬೇಕಿದ್ದು ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ಸಭೆಯ ಗಮನಕ್ಕೆ ತಂದರು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕೆÀ್ಷ ವಿಜಯಲಕ್ಮೀ ಸುರೇಶ್ ಮಾತನಾಡಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ವಿದ್ಯುತ್ ಸಮಸ್ಯೆ ನಗರವ್ಯಾಪ್ತಿಯಲ್ಲಿ ಕಂಡು ಬರುತ್ತಿದೆ ಎಂದರು.

ಸೋಮವಾರಪೇಟೆ ನಗರ ವ್ಯಾಪ್ತಿಯಲ್ಲಿ ವಾಟರ್ ಫಿಲ್ಟರ್ ಯೂನಿಟ್ ಹಳೆಯದಾಗಿದ್ದು ನೀರಿನ ಸರಬರಾಜಿನಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿದೆ ಈ ಬಗ್ಗೆ ಅನುದಾನದ ಅವಶ್ಯಕತೆ ಇದೆ. ನಗರದ ಆಡಳಿತ ವ್ಯವಸ್ಥೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ಇಂಜಿನಿಯರ್ ಬಿಲ್ ಕಲೆಕ್ಟರ್‍ಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.

ಸಭೆಯಲ್ಲಿ ನಾಲ್ಕನೆಯ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಹೆಚ್, ಶಶಿಧರ್, ಸಮಾಲೋಚಕರಾದ ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಉಪವಿಭಾಗಾ ಧಿಕಾರಿ ಡಾ. ನಂಜುಂಡ ಸ್ವಾಮಿ, ನಗರಸಭೆ ಪೌರಾಯುಕೆÀ್ತ ಬಿ.ಬಿ. ಪುಷ್ಪಾವತಿ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಕೆ ನಾಚಪ್ಪ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಮತ್ತಿತರರು ಇದ್ದರು.