ಶ್ರೀಮಂಗಲ, ಜೂ. 14: ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ವ್ಯವಸ್ಥೆಯನ್ನು ಹೊಂದಿದ್ದರೂ ಪ್ರಥಮ ದರ್ಜೆ ನೌಕರರು ಮತ್ತು ದಾದಿಯರು ಬೇಕಾಬಿಟ್ಟಿಯಾಗಿ ತಮಗಿಷ್ಟ ಬಂದ ಸಮಯದಲ್ಲಿ ಕೆಲಸಕ್ಕೆ ಹಾಜರಾಗುವದು ಮತ್ತು ಸಾರ್ವಜನಿಕರರಿಗೆ ಅರಿವು ಕಾರ್ಯಕ್ರಮ ಸಮರ್ಪಕವಾಗಿ ಮಾಡದೆ ಸುಮಾರು ರೂ. 3 ಲಕ್ಷದಷ್ಟು ಅವ್ಯವಹಾರ ನಡೆದಿರುವದು ದೃಢಪಟ್ಟಿದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದು ತನಿಖೆ ನಡೆಸಲಾಗುವದು ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ತಿಳಿಸಿದ್ದಾರೆ.

ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆಸ್ಪತ್ರೆಯಲ್ಲಿ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವದರ ಬಗ್ಗೆ ದೂರುಗಳು ಬಂದಿದ್ದು ಇದರ ಬಗ್ಗೆ ಕೂಲಂಕಶವಾಗಿ ತಿಳಿಯಲು ಸ್ಥಳಕ್ಕೆ ತೆರಳಿದಾಗ ಆಸ್ಪತ್ರೆಯ ಬಾಗಿಲು ಮುಚ್ಚಿದ್ದು, ವೈದÀ್ಯರಿಂದ ಹಿಡಿದು ಯಾರೊಬ್ಬರೂ ಸ್ಥಳದಲ್ಲಿರಲಿಲ್ಲ. ಫೋನ್ ಮುಖಾಂತರ ಸಿಬ್ಬಂದಿ ಸುದರ್ಶನ್ ಅವರನ್ನು ಬರಹೇಳಿ ಆಸ್ಪತ್ರೆಯ ಬಾಗಿಲೂ ತೆರೆದು ಕಡತಗಳನ್ನು ಪರಿಶೀಲಿಸಿದಾಗ ಇಲ್ಲಿಯ ಅವ್ಯವಹಾರ ಬೆಳಕಿಗೆ ಬಂದಿದೆ. ಒಂದೇ ದಿನದಲ್ಲಿ 3-4 ಕಡೆಗಳಲ್ಲಿ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ನಡೆಸಿದ್ದು ಇದರಲ್ಲಿ ಆಸ್ಪತ್ರೆಯ ಮೊಹರು ಸಹ ದಾಖಲಾಗಿಲ್ಲ. ವೈದ್ಯರ ಸಹಿ ಸಹ ಇಲ್ಲದೆ ಇರುವದು ಕಂಡು ಬಂದಿದೆ. ಕೆಲವೊಂದರಲ್ಲಿ ದಿನಾಂಕವನ್ನೇ ಬರೆಯದೆ ಹಾಗೆ ವರದಿ ತಯಾರಿಸಿ ಕಾರ್ಯಕ್ರಮದಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಮೇಲ್ನೋಟಕೆ ಸಾಬೀತಾಗಿದೆ. ಈ ಬಗ್ಗೆ ವೈದ್ಯಾಧಿಕಾರಿ ಡಾ. ರಾಸ್ಯ ಅವರನ್ನು ಸಂರ್ಪಕಿಸಲು ಯತ್ನಿಸಿದರೆ ಅವರು 2 ತಿಂಗಳ ರಜೆಯ ಮೇಲೆ ತೆರಳಿದ್ದು, ಫೋನಿನಲ್ಲ್ಲಿ ಜಿ.ಪಂ. ಸದಸ್ಯರಿಗೆ ಯಾವದೇ ಮಾಹಿತಿ ನೀಡದಂತೆ ಸುದರ್ಶನ್ ಅವರಿಗೆ ತಿಳಿಸಿದ್ದಾರೆ. ಇಲ್ಲಿ 6 ಜನ ದಾದಿಯರು ಇದ್ದರೂ ಎಲ್ಲರು ಫೀಲ್ಡ್ ವರ್ಕ್‍ಗೆ ತೆರಳಿದ್ದಾರೆಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇಲ್ಲಿ ಬರುವ ರೋಗಿಗಳಿಗೆ ವೈದÀ್ಯರಿಲ್ಲವೆಂಬ ಕೊರತೆ ನೀಗಿಸಲೂ ಕಳೆದ 11 ವರ್ಷಗಳ ಅನುಭವವಿರುವ ಡಿ ಗ್ರೂಪ್ ನೌಕರ ಮಾದಪ್ಪ ರೋಗಿಗಳಿಗೆ ಮಾತ್ರೆಗಳನ್ನು ನೀಡುತ್ತಾ ಬಂದು ವೈದ್ಯರು ಮಾಡುವ ಕೆಲಸವನ್ನು ಇವರು ಮಾಡುತ್ತಿರುವದು ಬೆಳಕಿಗೆ ಬಂತು. ಕಿರಿಯ ಪುರುಷ ಸಹಾಯಕ ನಿರ್ದೇಶಕ ಸುದರ್ಶನ್ ಪ್ರತಿದಿನ ಕೆಲಸಕ್ಕೆ ಹಾಜರಾಗಿ ಇತರ ನೌಕರರ ಬಗ್ಗೆ ಸಾರ್ವಜನಿಕರಿಗೆ ಸಮಜಾಯಿಸಿಕೆ ನೀಡುತ್ತಿದ್ದಾರೆ. ಈ ಹಿಂದೆ ಆಡಿಟ್ ಮಾಡುವಾಗ ರೂ. 3 ಲಕ್ಷದಷ್ಟು ಹಣವನ್ನು ದುರ್ಬಳಕ್ಕೆ ಮಾಡಿರುವದು ಕಂಡುಬಂದಿದೆ. ಇದನ್ನು ನಂತರ ಇಲ್ಲಿಯ ನೌಕರರೇ ಪಾವತಿ ಮಾಡಿದ್ದು ತಿಳಿದು ಬಂದಿದೆ. ಆಸ್ಪತ್ರೆಯ ಆವರಣದಲ್ಲಿ ಕಸ, ಗಿಡಗಂಟಿಗಳಿಂದ ಕೂಡಿದ್ದು ಈವರೆಗೆ ರಕ್ಷಾ ಸಮಿತಿಯ ಸಭೆ ನಡೆಯದೆ ಇದ್ದು ಸರಕಾರದಿಂದ ಬಂದ ಸುಮಾರು 1 ಲಕ್ಷದ 58 ಸಾವಿರ ರೂಪಾಯಿಗಳನ್ನು ಆಸ್ಪತ್ರೆಯ ಅಭಿವೃದ್ಧಿಗೆ ಬಳಸಿಕೊಳ್ಳದೆ ತಮಗಿಷ್ಟ ಬಂದ ರೀತಿಯಲ್ಲಿ ಬಳಸಿಕೊಂಡಿದ್ದು, ಸರಕಾರವೇ ಔಷಧಿಗಳನ್ನು ಸರಬರಾಜು ಮಾಡುತ್ತಿರಬೇಕಾದರೆ ಇಲ್ಲಿ ಈ ಹಣದಿಂದಲೂ ಮಾತ್ರೆಗಳನ್ನು ಸಹ ಖರೀದಿಸಲಾಗಿದೆ ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಆಧಾರ ಸಹಿತ ತೆರೆದಿಟ್ಟರು. ಅಷ್ಟೂ ಇದ್ದು ಕೆಲವೊಂದು ರೋಗಿಗಳಿಗೆ ದಿನಾಂಕ ಕಳೆದ ಮಾತ್ರೆಗಳನ್ನು ಸಹ ನೀಡುತ್ತಿದ್ದು, ಬಹಳಷ್ಟು ದುರುಪಯೋಗ ನಡೆದಿರುವದು ಕಂಡು ಬಂದಿದೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮತ್ತು ತಾಲೂಕು ವೈದ್ಯಾಧಿಕಾರಿಗಳಿಗೆ ದೂರು ದಾಖಲಿಸಿದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತನಿಖೆಗೆ ಒಳಪಡಿಸಲೂ ಆಗ್ರಹಿಸಲಾಗುವದು ಎಂದು ತಿಳಿಸಿದರು.

ಇಲ್ಲಿ ಖಾಯಂ ವೈದ್ಯರ ಕೊರತೆ ಇದ್ದು ಇದೀಗ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದ್ದು, ಆದಷ್ಟು ಬೇಗ ವೈದ್ಯಾಧಿಕಾರಿಗಳನ್ನು ನೇಮಿಸುವ ಭರವಸೆ ನೀಡಿದ್ದಾರೆ. ಆಸ್ಪತ್ರೆಯ ಅಭಿವೃದ್ಧಿಗಾಗಿ ಮತ್ತು ವೈದ್ಯಾಧಿಕಾರಿ ಗಳ ಕೊಠಡಿ ದುರಸ್ತಿಗಾಗಿ ಜಿ.ಪಂ. ನಿಧಿಯಿಂದ ರೂ. 2 ಲಕ್ಷ ಅನುದಾನಕ್ಕೆ ಮನವಿ ಸಲ್ಲಿಸಿದ್ದು, ಆದರೆ ಇಲ್ಲಿನ ಸಿಬ್ಬಂದಿಗಳ ಈ ವರ್ತನೆಯಿಂದ ಇಲ್ಲಿಗೆ ಅನುದಾನವನ್ನೂ ಏಕೆ ನೀಡಬೇಕು ಎನ್ನುವ ಬಗ್ಗೆ ಯೋಚನೆ ಮೂಡಿದೆ ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಬೇಸರ ವ್ಯಕ್ತ ಪಡಿಸಿದರು.