ಭಾಗಮಂಡಲ, ಜೂ. 12: ದಕ್ಷಿಣ ಭಾರತದ ಪುಣ್ಯಕ್ಷೇತ್ರ, ದಕ್ಷಿಣದ ಕಾಶಿ ಎಂದೇ ಖ್ಯಾತಿವೆತ್ತಿರುವ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕನ್ನಡ ನಾಡಿನ ಜೀವನಾಡಿ ಕಾವೇರಿ ಮಡಿಲಲ್ಲಿ ಸದ್ದಿಲ್ಲದೆ ಕುಡಿಯುವ ನೀರು ಉತ್ಪಾದನಾ ಘಟಕ ತಲೆಯೆತ್ತುತ್ತಿದೆ. ಕೋಟ್ಯಂತರ ಮಂದಿಗೆ ನೀರುಣಿಸುವ, ಅನ್ನದಾತರ ಜೀವನಾಡಿಯಾಗಿರುವ ಕಾವೇರಿ ತೀರದಲ್ಲಿ ‘ಮಿನರಲ್ ವಾಟರ್’ ತಯಾರಿಸುವ ಮೂಲಕ ಕಾವೇರಿ ನಾಡಲ್ಲೇ ಜಲಕ್ಷಾಮ ಉಂಟು ಮಾಡುವ ಹುನ್ನಾರ ನಡೆಯುತ್ತಿದೆ. ಪರಿಸರ ನಾಶದೊಂದಿಗೆ ಕುಡಿಯುವ ನೀರಿಗೆ ಕುತ್ತುಂಟಾಗಲಿರುವ ಈ ಅನಧಿಕೃತ ಯೋಜನೆ ವಿರೋಧದ ನಡುವೆಯೂ ಎಗ್ಗಿಲ್ಲದೆ ಸಾಗಿರುವದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದಲ್ಲಿ ‘ಕಾವೇರಿ ಮಿನರಲ್ ವಾಟರ್’ ಎಂಬ ಹೆಸರಿನಲ್ಲಿ ಘಟಕವೊಂದು ತಲೆಯೆತ್ತುತ್ತಿದೆ. ಸ್ಥಳೀಯರಿಂದ ಅಧರ್À ಎಕರೆಯಷ್ಟು ಜಾಗ ಖರೀದಿಸಿ ಈ ಜಾಗದಲ್ಲಿ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ನೂರಾರು ಮರಗಳ ಹನನ ಮಾಡಿ ಇಲ್ಲಿ ಬೃಹತ್ ಘಟಕ ಸ್ಥಾಪನೆ ಮಾಡುವ ಯೋಜನೆ ಇದಾಗಿದ್ದು, ಕಾವೇರಿ ಮಡಿಲಲ್ಲೇ ಕುಡಿಯುವ ನೀರಿನ ಮಾರಾಟ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.

ಅನಧಿಕೃತ ಯೋಜನೆ

ಈ ಯೋಜನೆಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಯಾವದೇ ಅಧಿಕೃತ ಪರವಾನಗಿ ಪಡೆದು ಕೊಂಡಿಲ್ಲ. ಆದರೂ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದೆ. ಈ ಯೋಜನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ, ಈ ಬಗ್ಗೆ ಈಚೆಗೆ ನಡೆದ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದು, ಕೆಲವು ಸದಸ್ಯರು ಪರವಾನಗಿ ನೀಡುವಂತೆ ಹೇಳಿದರೆ, ಇನ್ನೂ ಕೆಲವರು ನೀಡಬಾರದೆಂದು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ಸದಸ್ಯರು ದೂರು ನೀಡಿದವರು ಸಂಬಂಧಿಸಿದ ಗ್ರಾಮದವರಲ್ಲ, ಅವರ ದೂರನ್ನು ಪರಿಗಣಿಸಲಾಗುವ ದಿಲ್ಲವೆಂದು ಹೇಳಿದರೆ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ದೇಶದ ಪ್ರತಿ ಪ್ರಜೆಗೂ ವಿರೋಧಿಸುವ, ದೂರು ಸಲ್ಲಿಸುವ ಹಕ್ಕಿದೆ. ಪರಿಗಣನೆ ಮಾಡಬಹುದೆಂದು ಹೇಳಿದರು.

ಆಮಿಷದ ಆಸೆ

ಇದಾದ ಬಳಿಕ ದಂಡಿನ ಜಯಂತ್ ಎಂಬವರು ಮತ್ತೊಂದು ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟಕ ಸ್ಥಾಪನೆ ಮಾಡುತ್ತಿರುವವರು ಅಧಿಕಾರಿಗಳನ್ನು ಸಂಪರ್ಕಿಸಿ ಮಾತುಕತೆ ಮೂಲಕ ಅಮಿಷವೊಡ್ಡಿ ಅನುಮತಿ ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಅಭಿವೃದ್ಧಿ ಅಧಿಕಾರಿ ಯಾವದೇ ಕಾರಣಕ್ಕೂ ಅನುಮತಿ ನೀಡಲಾಗದೆಂದು ದಿಟ್ಟ ನಿಲುವು ಹೊಂದಿದ್ದಾರೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಕೊಡಲಾಗುವದೆಂಬ ಆಮಿಷವನ್ನು ಕೂಡ ಒಡ್ಡಲಾಗುತ್ತಿದೆ. ಈ ನಡುವೆ ಪರಿಸರ ರಕ್ಷಣೆಯ ಹೋರಾಟ ಮಾಡುತ್ತಿರುವ ಸಂಘಟನೆಯ ಪ್ರಮುಖರು ಸ್ಥಳಕ್ಕೆ ಧಾಳಿ ಮಾಡಿದ್ದರೂ ಅವರುಗಳ ಮನವೊಲಿಸುವಲ್ಲಿ ಸಂಸ್ಥೆಯವರು ಯಶಸ್ವಿಯಾಗಿದ್ದಾರೆ.

ನೀರಿಗೆ ತೊಂದರೆ

ಈ ಪ್ರದೇಶದಲ್ಲಿ ನೀರಿನ ಘಟಕ ಸ್ಥಾಪನೆಯಾದರೆ ಸ್ಥಳೀಯವಾಗಿ ನೀರಿನ ಸಮಸ್ಯೆ ಕಾಡಲಿದೆ ಎಂಬದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಪ್ರತಿದಿನ 1ಲಕ್ಷಕ್ಕೂ ಅಧಿಕ ಲೀಟರ್ ‘ಮಿನರಲ್ ವಾಟರ್’ ತಯಾರಿಸಿ ಹೊರ ಜಿಲ್ಲೆಗಳಿಗೆ ಸರಬರಾಜು ಮಾಡುವ ಬೃಹತ್ ಯೋಜನೆ ಇದಾಗಿದೆ. ಈ ನಿಟ್ಟನಲ್ಲಿ ಈಗಾಗಲೇ ಒಂದು ಕೊಳವೆ ಬಾವಿಯನ್ನು ಕೂಡ ಕೊರೆಯಲಾಗಿದೆ. ಕೊಳವೆ ಬಾವಿಗೆ ಅನುಮತಿ ಯಾವ ಆಧಾರದಲ್ಲಿ ನೀಡಲಾಗಿದೆ ಎಂಬದು ತಿಳಿದಿಲ್ಲ. ಇನ್ನೂ ಹಲವು ಕೊಳವೆ ಬಾವಿಗಳ ಅವಶ್ಯಕತೆ ಇದೆ. ಈಗಾಗಲೇ ಇಲ್ಲಿ ಕೊಳವೆ ಬಾವಿಯ ಆಳ 300 ರಿಂದ 400 ಅಡಿಗಳಿಗೆ ತಲಪಿದ್ದು, ಒಂದು ಕೊಳವೆ ಬಾವಿ ಕೊರೆದ ನಂತರ ನೀರಿನ ಕೊರತೆ ಎದುರಾಗಿದೆ. ಇನ್ನಷ್ಟು ಬಾವಿಗಳಾದಲ್ಲಿ ಸಮಸ್ಯೆ ಉಲ್ಬಣವಾಗಲಿದೆ ಎಂದು ಗ್ರಾಮಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿದ್ಯುತ್ ಸಂಪರ್ಕ

ಯಾವದೇ ಪರವಾನಗಿ ಇಲ್ಲದೆ, ಅನಧಿಕೃತವಾಗಿ ತಲೆ ಎತ್ತುತ್ತಿರುವ ಈ ಯೋಜನೆಗೆ ಸೆಸ್ಕ್ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಯಾವದೇ ದಾಖಲೆಗಳಿಲ್ಲದೆ ಯಾವ ಆಧಾರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂಬದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಯಾರು ಮಾಲೀಕರು..?

ಹರಿದ್ವರ್ಣದಿಂದ ಕೂಡಿರುವ ಕಾಡಿನ ಮಧ್ಯೆ ತಲೆಯೆತ್ತುತ್ತಿರುವ ಈ ಬೃಹತ್ ಯೋಜನಾ ಘಟಕದ ಮಾಲೀಕರು ಯಾರೆಂಬದು ಯಾರಿಗೂ ತಿಳಿದಿಲ್ಲ. ಎಲ್ಲಿಯೂ ಕೂಡ ಸಂಸ್ಥೆಯ ಮಾಲೀಕರ ಹೆಸರು ಉಲ್ಲೇಖವಾಗಿಲ್ಲ. ‘ಕಾವೇರಿ ಮಿನರಲ್ ವಾಟರ್’ ಎಂಬ ಹೆಸರಿನಲ್ಲಿ ಪತ್ರ ವ್ಯವಹಾರಗಳು ನಡೆಯುತ್ತಿವೆಯಷ್ಟೇ. ಇದರ ಹಿಂದೆ ಬೃಹತ್ ಉದ್ಯಮಿ, ರಾಜಕಾರಣಿಯೋರ್ವರ ‘ಹಾತ್’ ಇದೆ ಎಂಬದು ಕೇಳಿಬರುತ್ತಿರುವ ಗುಸು ಗುಸು ಮಾತು.