ಮಡಿಕೇರಿ, ಅ. 28: ಕೊಡಗಿನ ಬಹುಸಂಖ್ಯಾತರನ್ನು ನಿರ್ಧಯವಾಗಿ ಹತ್ಯೆಗೈದ ಹಾಗೂ ಸಹಸ್ರಾರು ಜನರನ್ನು ಮತಾಂತರ ಮಾಡಿದ ಟಿಪ್ಪು ಸುಲ್ತಾನ್ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಿಸುವದಕ್ಕೆ ಅಮ್ಮತ್ತಿ ಕೊಡವ ಸಮಾಜ ವಿರೋಧ ವ್ಯಕ್ತಪಡಿಸಿದೆ.

ಈ ಬಗ್ಗೆ ಅಮ್ಮತ್ತಿ ಕೊಡವ ಸಮಾಜ ಲಿಖಿತ ಪತ್ರಿಕಾ ಹೇಳಿಕೆ ನೀಡಿದ್ದು, ಕೊಡವ ಸಮಾಜ ಮುಸ್ಲಿಂ ವಿರೋಧಿಗಳಲ್ಲ. ಮುಸ್ಲಿಮರು ಇತಿಹಾಸ ಹಾಗೂ ವಾಸ್ತವಾಂಶವನ್ನು ಅರಿತು ಟಿಪ್ಪು ಜಯಂತಿ ಈ ಮಟ್ಟಿಗೆ ಆಚರಣೆ ಬೇಡ ಎನ್ನುವ ಕೊಡವ ಸಮುದಾಯದ ನಿಲುವಿಗೆ ಬೆಂಬಲ ನೀಡಬೇಕು.

ಗಾಂಧಿ ಜಯಂತಿ ಒಂದನ್ನು ಬಿಟ್ಟು ಬೇರೆ ಯಾವದೇ ಜಯಂತಿಯನ್ನು ಕರ್ನಾಟಕದಲ್ಲಿ ನಡೆಸಬಾರದೆಂದು ಒತ್ತಾಯಿಸಿದೆ. ಕಳೆದ ವರ್ಷ ಟಿಪ್ಪು ಜಯಂತಿಯಂದು ಕೊಡಗಿನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದ್ದು, ಮುಗ್ಧ ಜೀವಗಳು ಬಲಿಯಾಗಿವೆ. ಈ ವರ್ಷ ಸರಕಾರ ನಡೆಸಲು ತೀರ್ಮಾನಿಸಿರುವ ಟಿಪ್ಪು ಜಯಂತಿಯನ್ನು ಕರಾಳ ದಿವಸವನ್ನಾಗಿ ಆಚರಿಸಲು ತೀರ್ಮಾನಿಸಿರುವದಾಗಿ ತಿಳಿಸಿದೆ.

ಸರಕಾರ ಇನ್ನಾದರೂ ಟಿಪ್ಪು ಜಯಂತಿಯನ್ನು ಕೈಬಿಟ್ಟು ಕೊಡಗಿನ ಪ್ರಗತಿಯತ್ತ ಗಮನಹರಿಸಬೇಕಾಗಿದೆ. ಕಳೆದ ಮೂರು ವರ್ಷಗಳಿಂದ ಕೊಡಗನ್ನು ನಿರ್ಲಕ್ಷಿಸಲಾಗಿದೆ. ಯಾವದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆಂದು ಆರೋಪಿಸಿದೆ. ಕೊಡವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ, ಉಪಾಧ್ಯಕ್ಷ ಮೊಳ್ಳೆರ ಸದಾ ಅಪ್ಪಚ್ಚು, ಗೌರವ ಕಾರ್ಯದರ್ಶಿ ನೆಲ್ಲಮಕ್ಕಡ ಸಂಪತ್ ದೇವಯ್ಯ, ಖಜಾಂಚಿ ಕುಟ್ಟಂಡ ಬೋಜಿ ಅಯ್ಯಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಲಿಖಿತ ಹೇಳಿಕೆ ನೀಡಿದ್ದಾರೆ.