ಮಡಿಕೇರಿ, ಆ.13: ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೊನೆಗೂ ಸರಕಾರ “ಅಸ್ತು” ಎಂದಿದೆ. ಇದೀಗ ಆಡಳಿತಾತ್ಮಕ ಮಂಜೂರಾತಿ ದೊರಕಿದೆ.

ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಪ್ರಸ್ತಾವನೆಯನ್ನು ಸರಕಾರ ಅಂಗೀಕರಿಸಿದ್ದು ಬಸ್ ನಿಲ್ದಾಣ ನಿರ್ಮಾಣಕ್ಕೆ ಅಧಿಕೃತ ಸಮ್ಮತಿಯಿತ್ತಿದೆ. ಪ್ರಸ್ತಾವನೆಯಲ್ಲಿ ಮಡಿಕೇರಿ ಕೃಷಿ ವಿಶ್ವ ವಿದ್ಯಾಲಯ ನೀಡಿದ್ದ 3 ಎಕರೆ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ರೂ. 499 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಲಾಗಿತ್ತು. ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಬೆಂಗಳೂರಿನ ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) ಇಲಾಖೆಯ ಮುಖ್ಯ ಅಭಿಯಂತರರಿಂದ ತಾಂತ್ರಿಕ ಪರಿಶೀಲನೆಯನ್ನು ಪಡೆಯಲಾಗಿದೆ. ಇದರ ಅನ್ವಯ ಬಸ್ ನಿಲ್ದಾಣ ಕಾಮಗಾರಿಗೆ ಶೇ. 50 ಅನುದಾನವನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಒದಗಿಸುತ್ತದೆ. ಉಳಿದ ಶೇ. 50ರ ಅನುದಾನ ರೂ. 249 ಲಕ್ಷವನ್ನು ನಗರಸಭೆಯ ಅನುದಾನದಿಂದ ಭರಿಸಲಾಗುತ್ತದೆ. ಈ ಪ್ರಸ್ತಾವನೆಯನ್ನು ಅಂಗೀಕರಿಸಿ ಸರಕಾರವು ಇದೀಗ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅಲ್ಲದೆ ಷರತ್ತು ವಿಧಿಸಿದ್ದು ‘ಡಲ್ಟ್’ ನಿಂದ ಶೇ. 50 ಹಾಗೂ ಉಳಿದ ಶೇ. 50ನ್ನು ನಗರಸಭೆಯಲ್ಲಿ ವಿವಿಧ ಯೋಜನೆಗಳಡಿ ಲಭ್ಯವಿರುವ ಅನುದಾನಗಳಿಂದ ನಿಯಮಾನುಸಾರ ಭರಿಸುವಂತೆ ಹಾಗೂ “ಡಲ್ಟ್ “ ನಿಂದಾಗಲಿ ಅಥವ ಸರ್ಕಾರದಿಂದಾಗಲೀ ಹೆಚ್ಚುವರಿ ಅನುದಾನ ನಿರೀಕ್ಷಿಸತಕ್ಕದ್ದಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್ ಪಾವತಿಗೆ ತೊಂದರೆಯಾಗದಂತೆ ಕಾಮಗಾರಿಗೆ ಟೆಂಡರ್ ಕರೆಯುವ ಪೂರ್ವದಲ್ಲಿ ಶೇ. 50 ರಷ್ಟು ಅನುದಾನವನ್ನು ಕ್ರೋಢೀಕರಿಸಿ ಕೊಂಡು ಜಿಲ್ಲಾಧಿಕಾರಿಯವರಿಂದ ಅನುಮೋದನೆ ಪಡೆದುಕೊಳ್ಳತಕ್ಕದ್ದು. ಈ ರೀತಿ ಕ್ರಮ ಕೈಗೊಳ್ಳದಿದ್ದಲ್ಲಿ ಪೌರಾಯುಕ್ತರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಸರಕಾರೀ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕಾಮಗಾರಿಯ ಟೆಂಡರ್ ಪ್ರಕ್ರಿಯೆಗಳನ್ನು ಕೆ.ಟಿ.ಪಿ.ಪಿ ಕಾಯ್ದೆ-1999 ಮತ್ತು ಕೆ.ಟಿ.ಪಿ.ಪಿ. ನಿಯಮಗಳು-2000 ದ ಅನ್ವಯ e- ಠಿಡಿoಛಿ ಠಿoಡಿಣಚಿಟ ಮುಖಾಂತರ ಕೈಗೊಂಡು, ಟೆಂಡರ್‍ಗಳಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಕಾಮಗಾರಿಯನ್ನು ಅನುಷ್ಠಾನ ಗೊಳಿಸುವಂತೆ ಸೂಚಿಸಲಾಗಿದೆ.

ಯೋಜನೆಯ ವಿವರ : ಮಂಜೂರಾತಿ ದೊರೆತ ಯೋಜನೆಯ ವಿವರ ಈ ಕೆಳಗಿನಂತಿದೆ.

ಬಸ್ ನಿಲ್ದಾಣ ಕಾಮಗಾರಿಗೆ ರೂ. 250 ಲಕ್ಷ, ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ರೂ. 163 ಲಕ್ಷ, ಆವರಣ ಗೋಡೆ ಕಾಮಗಾರಿಗೆ ರೂ.13 ಲಕ್ಷ, ಕಾಂಕ್ರೀಟ್ ಚರಂಡಿ ಕಾಮಗಾರಿಗೆ ರೂ.52 ಲಕ್ಷ, ಶೌಚಾಲಯ ರಚನೆ ಕಾಮಗಾರಿಗೆ ರೂ. 20 ಲಕ್ಷ ಎಂದು ನಿಗದಿ ಮಾಡಲಾಗಿದೆ.

ಆಯುಕ್ತರ ಹೇಳಿಕೆ : ಇದೀಗ ಆಡಳಿತಾತ್ಮಕ ಮಂಜೂರಾತಿ ದೊರೆತಿರುವ ಯೋಜನೆಯ ಕುರಿತು ಮಡಿಕೇರಿ ನಗರಸಭಾ ಆಯುಕ್ತೆ ಪುಷ್ಪಾವತಿ ಅವರನ್ನು “ಶಕ್ತಿ” ಪ್ರಶ್ನಿಸಿದಾಗ ತಮ್ಮ ಕೈಗೆ ಇನ್ನೂ ಆದೇಶ ಬಂದಿಲ್ಲ. ಆದೇಶ ಬಂದೊಡನೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಟೆಂಡರ್ ಕರೆಯಲಾಗುವದು ಎಂದರು. ನಗರಸಭೆಯಲ್ಲಿ ಶೇ. 50 ರ ಹಣ ಲಭ್ಯತೆ ಕುರಿತು ಮಾಹಿತಿ ಬಯಸಿದಾಗ ನಗರಸಭೆ ಬಸ್ ನಿಲ್ದಾಣ ಕಾಮಗಾರಿಗೆ ರೂ. 125 ಲಕ್ಷ ಹಣವನ್ನು ಕಾಯ್ದಿರಿಸಿದೆ. ಆದರೆ, ಇನ್ನುಳಿದ ರೂ. 125 ಲಕ್ಷವನ್ನು ನಗರಸಭೆಗೆ ಭರಿಸಲಾಗುವದಿಲ್ಲ. ಈ ಹಿಂದೆ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್)ಗೆ ಪ್ರಸ್ತಾವನೆ ಸಲ್ಲಿಸುವಾಗ ನಗರಸಭಾ ಇಂಜಿನಿಯರ್‍ಗಳು ಶೇ. 50 ನ್ನು ನಗರಸಭೆ ಭರಿಸುವದಾಗಿ ಉಲ್ಲೇಖಿಸಿದ್ದು ತಪ್ಪಾಗಿದೆ. ಈ ಹಿನ್ನೆಲೆಯಲ್ಲಿ ಬಳಿಕ “ಡಲ್ಟ್” ನ ಅಧಿಕಾರಿಗಳನ್ನು ನಗರ ಸಭೆಯಿಂದ ಸಂಪರ್ಕಿಸಿದ್ದು ಶೇ. 25 ಮಾತ್ರ ನಗರಸಭೆ ಭರಿಸಲಿದ್ದು ಉಳಿದ ಶೇ. 75 ನ್ನು “ಡಲ್’್ಟ ನಿಂದ ನೀಡುವಂತೆ ಕೋರಲಾಗಿತ್ತು. ಇದೀಗ ಹಳೆಯ ಪ್ರಸ್ತಾವನೆಗೇ ಮಂಜೂರಾತಿ ದೊರೆತಿದ್ದರೆ “ಡಲ್ಟ್’’ ನ ಅಧಿಕಾರಿಗಳನ್ನು ಸಂಪರ್ಕಿಸಿ ಶೇ. 75 ಅನುದಾನ ನೀಡುವಂತೆ ಕೋರಲಾಗುವದು ಎಂದು ಪುಷ್ಪಾವತಿ ತಿಳಿಸಿದರು.