ಮಡಿಕೇರಿ, ಅ.28: ರಾಜ್ಯ 4ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ತಂಡವು ನಗರಸಭೆಗೆ ಭೇಟಿ ನೀಡಿ ನಗರಸಭಾ ಚುನಾಯಿತ ಪ್ರತಿನಿಧಿಗಳಿಂದ ಮಾಹಿತಿ ಪಡೆಯಿತು.

ಈ ಸಂದರ್ಭ ಮಾತನಾಡಿದ ಆಯೋಗದ ಅಧ್ಯಕ್ಷ ಸಿ.ಜಿ.ಚಿನ್ನಸ್ವಾಮಿ ಅವರು ಮೂಲ ಸೌಲಭ್ಯ ಕಲ್ಪಿಸಬೇಕಾದರೆ ವಿಕೇಂದ್ರಿಕರಣ ಅತೀ ಮುಖ್ಯ ಎಂದರು.

ಆಯೋಗದ ಸದಸ್ಯ ಡಾ.ಎಚ್.ಶಶಿಧರ ಮಾತನಾಡಿ ರಾಜ್ಯದಲ್ಲಿ 41 ನಗರಸಭೆಗಳಿದ್ದು, 11 ಮಾನದಂಡಗಳಲ್ಲಿ ಮಡಿಕೇರಿ ನಗರಸಭೆ 11 ನೇ ಸ್ಥಾನದಲ್ಲಿದ್ದು, ಉತ್ತಮ ಸ್ಥಾನವನ್ನು ಹೊಂದಿದೆ. ಅದೇ ರೀತಿ ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಪಟ್ಟಣ ಪಂಚಾಯಿತಿಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ನಗರಸಭಾ ಸದಸ್ಯ ಎ.ಸಿ.ದೇವಯ್ಯ ಮಾತನಾಡಿ ಮಡಿಕೇರಿ ನಗರ 35 ಸಾವಿರ ಜನಸಂಖ್ಯೆ ಇದ್ದು, ಇಲ್ಲಿನ ಸ್ಥಳೀಯ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವದೇ ಕಷ್ಟ ಸಾಧ್ಯವಾಗಿದೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಮನವಿ ಮಾಡಿದರು.

ಸದಸ್ಯ ಕೆ.ಎಂ.ಬಿ. ಗಣೇಶ್ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಯಥೇಚ್ಛವಾಗಿದ್ದು, ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಹೇಳಿದರು.

ಕೆ.ಜಿ.ಪೀಟರ್ ಮಾತನಾಡಿ ಮಡಿಕೇರಿ ನಗರದಲ್ಲಿ ವಾಸಿಸುವ ಅರ್ಧದಷ್ಟು ಜನರಿಗೆ ಸ್ವಂತ ಸೂರು ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದ್ದರಿಂದ ಬಡ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಮನವಿ ಮಾಡಿದರು.

ಅನಿತಾ ಪೂವಯ್ಯ ಮಾತನಾಡಿ ಈಗಾಗಲೇ ಹಳೇ ಮಾರುಕಟ್ಟೆಯನ್ನು ತೆರವುಗೊಳಿಸಿ, ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ. ಆದರೆ ಹಣ ಬಿಡುಗಡೆಯಾಗದೆ ಅರ್ಧಕ್ಕೆ ಕಾಮಗಾರಿ ನಿಂತಿದೆ ಎಂದು ಅಧ್ಯಕ್ಷರ ಗಮನಕ್ಕೆ ತಂದರು.

ಅಮೀನ್ ಮೊಹಿಸೀನ್ ಮಾತನಾಡಿ ಮಡಿಕೇರಿ ನಗರದಲ್ಲಿ ಸ್ಲಂ ಕಾಲೋನಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ನಗರಸಭೆ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಅವರು ತೆರಿಗೆ ಸಂಗ್ರಹದಲ್ಲಿ ನಗರಸಭೆ ಅಧಿಕಾರಿಯೊಬ್ಬರು ವಂಚನೆ ಮಾಡಿದ್ದು, ಈ ಸಂಬಂಧ ಇದುವರೆಗೆ ಯಾವದೇ ಶಿಕ್ಷೆಯಾಗಿಲ್ಲ ಎಂದು ಅಧ್ಯಕ್ಷರ ಗಮನಕ್ಕೆ ತಂದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್, ಸದಸ್ಯರಾದ ಪಿ.ಡಿ.ಪೊನ್ನಪ್ಪ, ಉನ್ನಿಕೃಷ್ಣ ಅವರು ನಗರದಲ್ಲಿ ಕಿರಿದಾದ ರಸ್ತೆ ಇದ್ದು, ರಸ್ತೆ ಅಗಲೀಕರಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದರು. ಸದಸ್ಯರಾದ ಪ್ರಕಾಶ್ ಆಚಾರ್ಯ, ಜುಲೈಕಾಬಿ, ಎಚ್.ಎಂ. ನಂದಕುಮಾರ್, ಉಸ್ಮಾನ್, ಉದಯಕುಮಾರ್ ಅವರು ಹಲವು ಸಲಹೆ ನೀಡಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕÀ ಡಾ.ನಂಜುಂಡೇಗೌಡ, ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ ಅವರು ಇದ್ದರು.