ಮಡಿಕೇರಿ, ಜೂ 15: ಕುಟ್ಟ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಮಂಚಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2016-17ನೇ ಸಾಲಿನ ಉಚಿತ ಪಠ್ಯ ಪುಸ್ತಕಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಅವರು ವಿತರಿಸಿದರು.

ಸರಕಾರ ಶಿಕ್ಷಣದ ಅಭಿವೃದ್ಧಿಗಾಗಿ ಹಲವಾರು ಸವಲತ್ತುಗಳನ್ನು ವ್ಯವಸ್ಥೆ ಮಾಡಿರುವದು ಸಂತೋಷದ ಸಂಗತಿ. ಉಚಿತವಾಗಿ ಪಠ್ಯ ಪುಸ್ತಕ, ನೋಟ್ ಪುಸ್ತಕ, ಬ್ಯಾಗ್, 2 ಜೊತೆ ಸಮವಸ್ತ್ರ, ಶೂ ಮತ್ತು ಸಾಕ್ಸ್, ಕ್ಷೀರಭಾಗ್ಯ, ಬಿಸಿಯೂಟ, ಕ್ರೀಡೆ, ಪ್ರತಿಭಾ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ತಮ್ಮ ಕರ್ತವ್ಯವೆಂದು ಪ್ರತೀ ಮಗುವಿಗೆ ತಲಪಿಸುವಲ್ಲಿ ಪ್ರಯತ್ನಿಸುತ್ತಿರುವ ಶಿಕ್ಷಕ ವೃಂದವನ್ನು ಅಭಿನಂದಿಸಿದರು.

ಎಲ್ಲಾ ಜಂಜಾಟಗಳ ನಡುವೆ ಶಿಕ್ಷಣದ ಗುಣಮಟ್ಟ ಕಾಯ್ದುಕೊಂಡು ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರ ಹಾಗೂ ಸಹ ಶಿಕ್ಷಕರ ತಾಳ್ಮೆ ಹಾಗೂ ಜವಾಬ್ದಾರಿ ಮೆಚ್ಚುವಂತದ್ದು. ಸರಕಾರದ ಎಲ್ಲಾ ವ್ಯವಸ್ಥೆ ಸಮರ್ಪಕವಾಗಿ ತಲಪಲು ಹಾಗೂ ಸದುಪಯೋಗವಾಗಲು ಶಿಕ್ಷಕರಿಗೆ ಬೆನ್ನೆಲುಬಾಗಿ ನಿಂತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅವರ ಕಾರ್ಯವೈಖರಿಯ ಬಗ್ಗೆಯೂ ಮಾಹಿತಿ ತಿಳಿದಿದ್ದೇನೆ. ಎಲ್ಲಾ ಮಕ್ಕಳು ಸದಾ ಶಾಲೆಗೆ ಬಂದು ಉತ್ತಮ ಶಿಕ್ಷಣವನ್ನು ಪಡೆದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ ಎಂದರು.

ತಾ.ಪಂ. ಸದಸ್ಯ ಪಲ್ವಿನ್, ಗ್ರಾ.ಪಂ. ಅಧ್ಯಕ್ಷೆ ಲೀಲಾ ಪ್ರಭು, ಗ್ರಾ.ಪಂ. ಸದಸ್ಯೆ ರುಕ್ಮಿಣಿ ಜೊತೆಯಾಗಿದ್ದು ಈ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುತ್ತೇವೆ ಎಂದರಲ್ಲದೆ ಈ ಶಾಲೆ ಫೆಬ್ರವರಿಯಲ್ಲಿ ಶತಮಾನೋತ್ಸವಕ್ಕೆ ಸಿದ್ಧತೆ ಆಗುತ್ತಿರುವದನ್ನು ಕೇಳಿ ತುಂಬಾ ಸಂತೋಷವಾಗಿದೆ. ಕ್ಷೇತ್ರದ ಈ ಶಾಲೆಗೆ ಮುಖ್ಯ ಶಿಕ್ಷಕ ಕೆ.ಎಂ. ಸೋಮಯ್ಯ ಅವರ ಕೋರಿಕೆಯಂತೆ ಇಡೀ ಕಟ್ಟಡಕ್ಕೆ ಸುಣ್ಣ-ಬಣ್ಣ ಕಾಮಗಾರಿಗೆ ಅನುದಾನ ಹೊಂದಿಸಲು ಪ್ರಯತ್ನಿಸುವದಾಗಿ ಹೇಳಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷೆ ಕೆ.ಎನ್. ದೇವಮ್ಮ, ತಾ.ಪಂ. ಸದಸ್ಯ ರಾದ ಪಲ್ವಿನ್ ಪೂಣಚ್ಚ, ಗ್ರಾ.ಪಂ. ಸದಸ್ಯೆ ರುಕ್ಮಿಣಿ ಸಭೆಯಲ್ಲಿ ಹಾಜರಿದ್ದರು.