ಮಡಿಕೇರಿ, ಆ.20: ಬಹುಸಂಖ್ಯಾತ ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 101 ನೇ ಜನ್ಮ ದಿನಾಚರಣೆ ಹಾಗೂ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಡವರ ಬಂಧು, ದೀನ, ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಅರಸು ಅವರ ಗಟ್ಟಿ ನಿಲುವು, ಧೈರ್ಯ ಮೆಚ್ಚುವಂತದ್ದು, ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜೀತಪದ್ಧತಿ ನಿರ್ಮೂಲನೆ, ಉಳುವವನೇ ಭೂಮಿಯ ಒಡೆಯ... ಹೀಗೆ ವಿವಿಧ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು ಎಂದು ಸುನಿಲ್ ಸುಬ್ರಮಣಿ ತಿಳಿಸಿದರು.

ಸಾಹಿತಿ ಪ್ರೊ.ಸಿ. ನಾಗಣ್ಣ ಮಾತನಾಡಿ ‘ಸಮಾಜದಲ್ಲಿ ಹಲವು ಮಂದಿ ಹುಟ್ಟುತ್ತಾರೆ ಮತ್ತು ನಿಧನ ಹೊಂದುತ್ತಾರೆ. ಹುಟ್ಟು ಮತ್ತು ಸಾವಿನ ನಡುವೆ ಕೆಲವು ಮಂದಿ ಮಾತ್ರ ಹೆಜ್ಜೆ ಗುರುತು ಬಿಟ್ಟು ಹೋಗಿರುತ್ತಾರೆ. ಅಂತವರ ಸಾಲಿಗೆ ಡಿ.ದೇವರಾಜ ಅರಸು ಅವರು ಸೇರ್ಪಡೆಯಾಗುತ್ತಾರೆ ಎಂದು ವರ್ಣಿಸಿದರು.

ಡಿ.ದೇವರಾಜ ಅರಸು ಅವರ ಆಡಳಿತಾವಧಿಯ 80ರ ದಶಕವನ್ನು ಸಾಮಾಜಿಕ ಕಳಕಳಿಯ ದಶಕ ಎಂದರೆ ತಪ್ಪಾಗಲಾರದು. ಯೋಜನಾ ಆಯೋಗ ಸೇರಿದಂತೆ ಡಿ.ದೇವರಾಜ ಅರಸು ಅವರು ಜಾರಿಗೊಳಿಸಿದ ಹಲವು ಕಾರ್ಯಕ್ರಮಗಳನ್ನು ರಾಷ್ಟ್ರಮಟ್ಟದಲ್ಲಿ ಅನುಕರಣೆ ಮಾಡಲಾಯಿತು. 20 ಅಂಶಗಳ ಕಾರ್ಯಕ್ರಮಗಳ ಯಶಸ್ವಿಯಾಗಿ ಅನುಷ್ಠಾನವಾಗಲು ಡಿ.ದೇವರಾಜ ಅರಸು ಅವರು ಕಾರಣ ಎಂದು ಸಿ.ನಾಗಣ್ಣ ನುಡಿದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ ಸಾಮಾಜಿಕ ಕ್ರಾಂತಿಯ ಮಹಾನ್ ವ್ಯಕ್ತಿ ಎಂದರೆ ಡಿ.ದೇವರಾಜ ಅರಸು, ಸ್ವಾತಂತ್ರ್ಯ ಭಾರತದಲ್ಲಿ ಗೌರವದಿಂದ ಬಾಳಲು ಸಂವಿಧಾನ ಅವಕಾಶ ನೀಡಿದೆ. ಆ ನಿಟ್ಟಿನಲ್ಲಿ ಡಿ.ದೇವರಾಜ ಅರಸು ಅವರು ಬಡವರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ದರು. ಜನ ಸಾಮಾನ್ಯರಲ್ಲಿ ಬದುಕುವ ವಿಶ್ವಾಸ ಮೂಡಿಸಿದರು ಎಂದು ಹೇಳಿದರು.

ನಗರಸಭಾ ಅಧ್ಯಕೆÀ್ಷ ಶ್ರೀಮತಿ ಬಂಗೇರ ಮಾತನಾಡಿ ಭೂ ಸುಧಾರಣಾ ಕಾಯ್ದೆ, ವೃದ್ಧಾಪ್ಯ ವೇತನ, ಭಾಗ್ಯ ಜ್ಯೋತಿ, ಋಣ ಪರಿಹಾರ, ಕನಿಷ್ಟ ಕೂಲಿ ಹೀಗೆ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸಾಮಾಜಿಕ ಸುಧಾರಣೆಯ ಹರಿಕಾರ ಡಿ.ದೇವರಾಜ ಅರಸು ಅವರ ಕುರಿತ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಸಿಇಓ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ, ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಜೆ. ಸೋಮಣ್ಣ, ಕೂಡಿಗೆ ಮೋರಾಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಕಾಶ್ ಮತ್ತಿತರರು ಇದ್ದರು.

ಡಿ.ದೇವರಾಜ ಅರಸು ಜೀವನ ಸಾಧನೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಯಿತು. ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ದೇವರಾಜ ಅರಸು ಅವರ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆ, ಭಾಷಣ ವಿಭಾಗದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ಸ್ವಾಗತಿಸಿ, ನಿರೂಪಿಸಿ ದರು. ಹುದಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀನಿವಾಸ್ ಪ್ರಾರ್ಥಿಸಿದರು. ಕೊಡ್ಲಿಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶೇಖರ್ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿಧಾನಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಚಾಲನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಕಾವೇರಿ ಕಲಾಕ್ಷೇತ್ರದವರೆಗೆ ಡೊಳ್ಳುಕುಣಿತ, ವೀರಗಾಸೆ, ನಾದಸ್ವರ, ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಮತ್ತಿತರರು ಭಾಗವಹಿಸಿದ್ದರು.