ಮಡಿಕೇರಿ, ಜು.22 : ದಕ್ಷಿಣ ಕೊಡಗಿನ ಕಡಂಗದ ಮರೂರು ಗ್ರಾಮದ ಬೆಳೆಗಾರರೊಬ್ಬರ ತೋಟಕ್ಕೆ ತೆರಳುವ ಹಾದಿಗೆ ಅಡ್ಡಲಾಗಿ ವ್ಯಕ್ತಿಯೊಬ್ಬರು ಅಳವಡಿಸಿರುವ ಬೇಲಿಯನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯ ಆದೇಶ ನೀಡಿದ್ದರೂ ಜಿಲ್ಲೆಯ ಕಂದಾಯ ಅಧಿಕಾರಿಗಳು ಯಾವದೇ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಆರೋಪಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕಟ್ಟಿ ಮಂದಯ್ಯ ಮುಂದಿನ 10 ದಿನಗಳ ಒಳಗಾಗಿ ಬೇಲಿ ತೆರವುಗೊಳಿಸದಿದ್ದಲ್ಲಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವ ದಾಗಿ ಎಚ್ಚರಿಕೆ ನೀಡಿದರು. 2013 ರಿಂದ ಪರಿಹಾರವಾಗದ ಸಮಸ್ಯೆಯ ಬಗ್ಗೆ ಮರೂರು ಗ್ರಾಮದ ಪೂಣಚ್ಚ ಹಾಗೂ ಗಂಗಮ್ಮ ದಂಪತಿಗಳು ಸಮಿತಿಯೊಂದಿಗೆ ದೂರಿಕೊಂಡ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಬೇಲಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವದಾಗಿ ಅಪರ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಕಳೆದ ಬಾರಿ ನಡೆದ ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಇದೇ ಭರವಸೆಯನ್ನು ನೀಡಿದ್ದರಾದರೂ ವಿವಾದಿತ ಸ್ಥಳಕ್ಕೆ ತೆರಳಿದ ಅಧಿಕಾರಿಗಳಿಗೆ ಬೇಲಿ ಅಳವಡಿಸಿದ ವ್ಯಕ್ತಿ ವಿರೋಧ ವ್ಯಕ್ತಪಡಿಸಿದರು ಎನ್ನುವ ಕಾರಣಕ್ಕಾಗಿ ಯಾವದೇ ಕ್ರಮ ಕೈಗೊಳ್ಳದೆ ವಾಪಸ್ಸಾಗಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಬೇಲಿಯನ್ನು ತೆರವುಗೊಳಿಸಲು ಧೈರ್ಯತೋರದ ಅಧಿಕಾರಿಗಳಿಂದಾಗಿ ಪೂಣಚ್ಚ ಹಾಗೂ ಗಂಗಮ್ಮ ದಂಪತಿಗಳು ತೋಟಕ್ಕೆ ತೆರಳಲಾಗದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈಗಿನ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಯಾವದಕ್ಕೂ ಭಯ ಪಡದೇ ಇರುವದರಿಂದ ನ್ಯಾಯಾಂಗಕ್ಕೆ ತಲೆಬಾಗಲೇ ಬೇಕೆನ್ನುವ ಉದ್ದೇಶದಿಂದ ನ್ಯಾಯಾಲಯದಿಂದ ಆದೇಶವನ್ನು ತರಲಾಗಿದೆ. ಇದಕ್ಕೂ ಸ್ಪಂದನೆ ದೊರೆಯದೆ ಇರುವದರಿಂದ ಮುಂದಿನ 10 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವದಾಗಿ ಕಟ್ಟಿ ಮಂದಯ್ಯ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಪೂಣಚ್ಚ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಭೀಮಯ್ಯ ಮತ್ತು ತಂಗಮ್ಮ ನಾಣಯ್ಯ ಉಪಸ್ಥಿತರಿದ್ದರು.