ಮಡಿಕೇರಿ, ನ. 24: ಇಪ್ಪತ್ತ ಮೂರು ವಾರ್ಡ್, 33, 381 ರಷ್ಟು ಅಧಿಕೃತವಾದ ಜನಸಂಖ್ಯೆ, 17.04 ಚದರ ಕಿಲೋ ಮೀಟರ್ ವಿಸ್ತೀರ್ಣ ಮನೆಗಳು, ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಸುಮಾರು 8 ಸಾವಿರ ಆಸ್ತಿ (ಪ್ರಾಪರ್ಟಿ) ಹೊಂದಿರುವ ಜಿಲ್ಲಾ ಕೇಂದ್ರ ಮಡಿಕೇರಿ ಕೊಡಗಿನ ಏಕೈಕ ನಗರಸಭೆಯಾಗಿದೆ. ಈ ನಗರದಲ್ಲಿಯೂ ರಾಜ್ಯದ ಇತರೆಡೆಗಳಂತೆ ಕಸ ವಿಲೇವಾರಿಯದ್ದು ಸಾಮಾನ್ಯ ಸಮಸ್ಯೆ ಎನಿಸಿದೆ.

ರಾಜ್ಯ ಸರಕಾರದ ಪೌರಾಡಳಿತ ನಿರ್ದೇಶನಾಲಯ 2014ರ ಅಕ್ಟೋಬರ್‍ನಲ್ಲಿ ಕಸವಿಲೇವಾರಿಗೆ ಸಂಬಂಧಿಸಿದಂತೆ ಆದೇಶವೊಂದನ್ನು ಹೊರಡಿಸಿತ್ತು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಕಂಟೈನರ್‍ಗಳನ್ನು (ಕಸದತೊಟ್ಟಿ) ಖರೀದಿಸದಂತೆ ಹಾಗೂ ಬಳಸದಂತೆ ಸೂಚಿಸಲಾಗಿತ್ತು. ಮನೆ ಮನೆಗಳಿಂದಲೇ ಕಸ ಸಂಗ್ರಹಿಸಿ ಕಸವನ್ನು ನೇರವಾಗಿ ವಿಲೇವಾರಿ ಸ್ಥಳಕ್ಕೆ ಕೊಂಡೊಯ್ಯಬೇಕೆಂದು ಈ ಆದೇಶದಲ್ಲಿ ನಿರ್ದೇಶಿಸಲಾಗಿದೆ. ಇದರಂತೆ ಕಸ ಸಂಗ್ರಹಣೆಯನ್ನು ಸ್ತ್ರೀ ಶಕ್ತಿ ಸಂಘ ನಿರ್ವಹಿಸುತ್ತಿದೆ. ಆದರೆ ಮಡಿಕೇರಿ ನಗರದ ವಿಚಾರವೇ ಬೇರೆ. ಭೌಗೋಳಿಕವಾಗಿ ನಗರ ವ್ಯಾಪ್ತಿ ವಿಭಿನ್ನವಾಗಿದೆ. ಕಿರಿದಾದ ರಸ್ತೆಗಳು, ಬೆಟ್ಟಗುಟ್ಟದಂತ ಪ್ರದೇಶ ಇದಾಗಿದ್ದು, ಇಲ್ಲಿ ಸರಕಾರ ಹೊರಡಿಸಿದ ಕಾನೂನಿನಂತೆ ಕಸ ಸಂಗ್ರಹಣೆ ಒಂದು ರೀತಿಯಲ್ಲಿ ಕಷ್ಟ ಸಾಧ್ಯವೇ ಸರಿ ಎಂಬದು ಹಲವರ ಅಭಿಪ್ರಾಯವಾಗಿದೆ.

(ಮೊದಲ ಪುಟದಿಂದ) ಈ ಕಾರಣದಿಂದಾಗಿ ಸ್ತ್ರಿ ಶಕ್ತಿ ಸಂಘದ ಕರ್ತವ್ಯ ನಿರ್ವಹಣೆಯ ನಡುವೆಯೂ ಮಡಿಕೇರಿ ನಗರದಲ್ಲಿ ಈ ತನಕ ಅಲ್ಲಲ್ಲಿ ಕಂಟೈನರ್‍ಗಳು, ಕಸದತೊಟ್ಟಿಗಳನ್ನು ಇಡಲಾಗಿತ್ತು. ಜನರೂ ಕಸವನ್ನು ಕಂಟೈನರ್‍ಗಳಲ್ಲಿ ಹಾಕುತ್ತಿದ್ದು, ನಗರಸಭೆಯ ಪೌರ ಕಾರ್ಮಿಕರು ಇದನ್ನು ವಿಲೇವಾರಿ ಮಾಡುತ್ತಿದ್ದರು. ಸರಕಾರದ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಂತಿರಲಿಲ್ಲ.

ದಿಢೀರ್ ತೆರವು

ನಗರಸಭೆಗೆ ಇತ್ತೀಚೆಗೆ ಹೊಸ ಆಯುಕ್ತರಾಗಿ ಶುಭಾ ಅವರು ಆಗಮಿಸಿದ್ದಾರೆ. ಇವರು ಇದೀಗ ಸರಕಾರ 2014ರಲ್ಲಿ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಇವರ ಸೂಚನೆಯಂತೆ ಇದೀಗ ನಗರದ ವಿವಿಧೆಡೆ ಇದ್ದ ಸುಮಾರು 24 ಕಂಟೈನರ್‍ಗಳನ್ನು ತೆರವುಗೊಳಿಸಲಾಗಿದೆ. ಕಂಟೈನರ್‍ಗಳಲ್ಲಿ ಕಸ ಹಾಕುತ್ತಿದ್ದ ಜನತೆ ಇದರಿಂದ ಕಂಗಾಲಾಗಿದ್ದಾರೆ. ಕಂಟೈನರ್ ಇದ್ದ ಸ್ಥಳಗಳಲ್ಲೇ ಕಸ ಸುರಿಯುತ್ತಿರುವದರಿಂದ ಕಸದ ರಾಶಿ ತುಂಬಿ ತುಳುಕುತ್ತಿದ್ದು, ಗಾಳಿಗೆ ಹಾರಾಡುತ್ತಿದೆ.

ನಗರದಲ್ಲಿ ಪ್ರಸ್ತುತ ಕಸ ಸಂಗ್ರಹದ ಜವಾಬ್ದಾರಿಯನ್ನು ಚಂದನ ಸ್ತ್ರೀ ಶಕ್ತಿ ಸಂಘಕ್ಕೆ ವಹಿಸಲಾಗಿದೆ. ಈ ಸಂಘ ಆರು ಟ್ರ್ಯಾಕ್ಟರ್ ಹಾಗೂ ಟಾಟಾಏಸ್ ವಾಹನವನ್ನು ಹೊಂದಿದೆ. ನಗರಸಭೆಯಲ್ಲಿ 3 ಟ್ರ್ಯಾಕ್ಟರ್ ಇವೆ. ನಗರಸಭೆ ವಾಸದ ಮನೆಗೆ ರೂ. 180 ಹಾಗೂ ವಾಣಿಜ್ಯ ಕಟ್ಟಡಕ್ಕೆ ರೂ. 360ನ್ನು ಜನರು ತೆರಿಗೆ ಕಟ್ಟುವಾಗಲೇ ಸಂಗ್ರಹಿಸುತ್ತಿದೆ.

ಸ್ತ್ರೀ ಶಕ್ತಿ ಸಂಘದ ಮೂಲಕ ಮನೆ ಮನೆಯಿಂದ ಕಸ ಸಂಗ್ರಹಿಸುವ ಕೆಲಸಕ್ಕೆ ಒಂದು ಟ್ರ್ಯಾಕ್ಟರ್‍ಗೆ ತಿಂಗಳಿಗೆ ನಗರಸಭೆಯಿಂದ ರೂ. 30 ಸಾವಿರ ಹಣ ನೀಡಲಾಗುತ್ತಿದೆ. ಒಂದು ವಾಹನದಲ್ಲಿ ಓರ್ವ ಚಾಲಕ ಹಾಗೂ ಸಹಾಯಕ ಇದ್ದು, ಚಾಲಕರಿಗೆ ತಿಂಗಳಿಗೆ ರೂ. 10 ಸಾವಿರ, ಸಹಾಯಕರಿಗೆ ರೂ. 6 ಸಾವಿರ ಹಣವನ್ನು ಸ್ತ್ರೀ ಶಕ್ತಿ ಸಂಘ ನೀಡಬೇಕಾಗಿದೆ. ವಿಲೇವಾರಿ ಸ್ಥಳಕ್ಕೆ ಕಸ ಸಾಗಿಸಲು ತಿಂಗಳಿಗೆ ರೂ. 12 ಸಾವಿರದಷ್ಟು ಡೀಸಲ್ ಬೇಕೆಂದು ಸ್ತ್ರೀ ಶಕ್ತ್ತಿ ಸಂಘದ ಜಮೀಲ ತಿಳಿಸಿದ್ದಾರೆ.

ಅಧಿಕ ವೆಚ್ಚ

ಇದೀಗ ಕಂಟೈನರ್‍ಗಳನ್ನು ದಿಢೀರನೆ ತೆರವುಗೊಳಿಸಿರುವದರಿಂದ ಸ್ತ್ರೀ ಶಕ್ತಿ ಸಂಘಕ್ಕೆ ಹೊರೆ ಹೆಚ್ಚಾಗಲಿದೆ. ಈ ತನಕ ವಿವಿಧ ಕಡೆಗಳಿಂದ ದಿನಕ್ಕೆ ಒಮ್ಮೆ ಬೆಳಿಗ್ಗೆ ಟ್ರ್ಯಾಕ್ಟರ್ ಮೂಲಕ ಕಸ ಸಂಗ್ರಹಿಸಲಾಗುತಿತ್ತು. ಆದರೆ 10 ಗಂಟೆ ನಂತರ ತೆರಳಿದರೆ ಕೆಲಸಕ್ಕೆ ತೆರಳುವ ಮಂದಿ ಮನೆಯಲ್ಲಿ ಇಲ್ಲದಿರುವದರಿಂದ ಟ್ಯ್ರಾಕ್ಟರ್‍ಗೆ ಇಂತಹವರು ಕಸ ಹಾಕುತ್ತಿರಲಿಲ್ಲ. ಕಂಟೈನರ್ ಬಳಕೆಯಾಗುತ್ತಿತ್ತು. ಇದೀಗ ಕನಿಷ್ಟ ದಿನಕ್ಕೆ ಎರಡು ಬಾರಿ ಕಸ ಸಂಗ್ರಹಿಸಬೇಕಾಗಿದ್ದು, ಸಂಘ ಈ ಬಗ್ಗೆ ಮುಂದಾಗುತ್ತಿದೆ. ಆದರೆ ಈ ಹಿಂದೆ ನೀಡುತ್ತಿದ್ದ ರೂ. 30 ಸಾವಿರ ಹಣವೇ ಸಾಕಾಗುತ್ತಿರಲಿಲ್ಲ. ಇದೀಗ ಎರಡು ಬಾರಿ ಸಂಗ್ರಹಿಸಬೇಕೆಂದರೆ ಅಧಿಕ ಹಣ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ನಗರಸಭೆ ಗಮನ ಹರಿಸಬೇಕೆಂದು ಜಮೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಸ ಟಿಪ್ಪರ್ ಖರೀದಿಸಲಿ : ಪ್ರಕಾಶ್

ಆಯುಕ್ತರು ಕಾನೂನು ಜಾರಿಗೆ ಮುಂದಾಗಿದ್ದಾರೆ ಆದರೆ ಜನರು ಮಾಹಿತಿ ಇಲ್ಲದೆ ಬೇಕಾಬಿಟ್ಟಿಯಾಗಿ ಕಸ ಹಾಕುವಂತಾಗಿದೆ. 2012ರಿಂದ ನಗರಸಭೆಗೆ ಹೊಸ ಕಂಟೈನರ್ ಖರೀದಿಸಿಲ್ಲ. ಈ ಹಿಂದೆ ಕಂಟೈನರ್ ಖರೀದಿಗೆ ಬಹುತೇಕ ಸದಸ್ಯರು ಎಲ್ಲಾ ಸಭೆಗಳಲ್ಲಿ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ನಗರಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಪ್ರತಿಕ್ರಿಯಿಸಿದರು. ಇದೀಗ ಇದ್ದ ಕಂಟೈನರ್‍ಗಳನ್ನು ತೆರವುಗೊಳಿಸಿರುವದರಿಂದ ಸಮಸ್ಯೆಯಾಗಲಿದೆ. ಎಲ್ಲಾ ಕಡೆಗಳಿಗೆ ಟ್ಯ್ರಾಕ್ಟರ್ - ಲಾರಿ ತೆರಳಲು ಸಾಧ್ಯವಿಲ್ಲ. ಅದರಲ್ಲೂ ಟ್ಯ್ರಾಕ್ಟರ್ ಮೂಲಕ ಸಂಗ್ರಹಣೆ ತಡವಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡು ಟಿಪ್ಪರ್ ವಾಹನ ಖರೀದಿಸುವಂತೆ ಆಯುಕ್ತರೊಂದಿಗೆ ಬಿಜೆಪಿ ಸದಸ್ಯರು ಚರ್ಚಿಸಿರುವದಾಗಿ ಅವರು ತಿಳಿಸಿದರು. ಟಿಪ್ಪರ್ ಆದರೆ ವೇಗವಾಗಿ ಕಸವನ್ನು ವಿಲೇವಾರಿ ಸ್ಥಳಕ್ಕೆ ಸಾಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸಣ್ಣ ಟ್ಯ್ರಾಕ್ಟರ್‍ಗೆ ಬೆಂಕಿ

ವಿವಿಧೆಡೆ ಇಡಲಾಗಿದ್ದ ಕಂಟೈನರ್‍ಗಳ್ನು ವಿಲೇವಾರಿ ಸ್ಥಳಕ್ಕೆ ಎತ್ತಿ ಸಾಗಿಸಲು ನಗರಸಭೆಯಲ್ಲಿ ಸಣ್ಣ ಟ್ರ್ಯಾಕ್ಟರ್ ಒಂದಿತ್ತು. ಈ ಟ್ರ್ಯಾಕ್ಟರ್‍ಗೆ ದಸರಾ ಸಂದರ್ಭದಲ್ಲಿ ಯಾರೋ ಬೆಂಕಿ ಹಚ್ಚಿದ್ದು, ಇದು ಬಹುತೇಕ ಗುಜರಿ ಸೇರುವಂತಾಗಿದೆ. ದೊಡ್ಡ ಲಾರಿಗಳನ್ನು ಕಂಟೈನರ್ ವಿಲೇವಾರಿಗೆ ಬಳಸಲು ಸಾಧ್ಯವಿಲ್ಲ ಎಂದು ಟಿ.ಎಸ್. ಪ್ರಕಾಶ್ ಹೇಳಿದರು.

ಸಿಬ್ಬಂದಿ ಕೊರತೆ

ನಗರಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರ 3 ಹುದ್ದೆಯಲ್ಲಿ 1 ಹುದ್ದೆ ತೆರವಾಗಿದೆ. ಕಿರಿಯ ಆರೋಗ್ಯ ನಿರೀಕ್ಷಕರ 3 ಹುದ್ದೆ ಪೈಕಿ ಎಲ್ಲವೂ ಖಾಲಿ ಇದೆ. ನಗರದ ಜನಸಂಖ್ಯೆಗೆ ಸುಮಾರು 100 ಪೌರ ಕಾರ್ಮಿಕರು ಬೇಕಾಗುತ್ತಾರೆ. ಆದರೆ ನಗರಸಭೆಯಲ್ಲಿ 15 ಮಂದಿ ಶಾಶ್ವತ ಕಾರ್ಮಿಕರು ಹಾಗೂ ಹೊರಗುತ್ತಿಗೆ ಆದಾರದಲ್ಲಿ ಸುಮಾರು 42ರಷ್ಟು ಸ್ವಚ್ಛತಾ ಸಿಬ್ಬಂದಿಗಳು ಮಾತ್ರ ಇದ್ದಾರೆ.